‘ಇತಿಹಾಸದ ಪ್ರಜ್ಞೆಯೊಂದಿಗೆ ಕ್ರಿಯಾಶೀಲತೆ ಬೆರೆತರೆ ನಾಡು ಕಟು್ಟವುದು ಸುಲಭ’
ಅಂಕೋಲಾ, ಆ.29: ಪ್ರಬುದ್ಧ ಕರ್ನಾಟಕವನ್ನು ನಿರ್ಮಿಸುವಲ್ಲಿ ಅಂಕೋಲಾದ ನವ ಕರ್ನಾಟಕ ಸಂಘವು ಭೂಮಿಕೆಯಾಗಲಿದೆಯೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉತ್ತರ ಕನ್ನಡ ಜಿಲ್ಲೆಯ ಉಪನಿರ್ದೇಶಕ ಎ.ಬಿ. ಪುಂಡಲೀಕ ಹೇಳಿದರು.
ಅವರು ಪಟ್ಟಣದ ಪೂರ್ಣಪ್ರಜ್ಞ ಪ್ರೌಢಶಾಲೆಯಲ್ಲಿ ನೂತನವಾಗಿ ಆರಂಭವಾದ ಅಂಕೋಲಾದ ನವ ಕರ್ನಾಟಕ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇವಲ ಕನ್ನಡ ಭಾಷೆ ಮತ್ತು ನೆಲದ ಕುರಿತು ಒಲವಿದ್ದರೆ ಸಾಲದು, ಸಾಹಿತ್ಯ ಮತ್ತು ಇತಿಹಾಸದ ಪ್ರಜ್ಞೆಯೊಂದಿಗೆ ಕ್ರಿಯಾಶೀಲತೆಯಿದ್ದಾಗ ಮಾತ್ರ ನಾಡು ನುಡಿಯನ್ನು ಕಟ್ಟಬಹುದು. ಸಮಾನ ಮನಸ್ಕರಾದ ಪ್ರಬುದ್ಧರನ್ನೊಳಗೊಂಡಿರುವ ನವ ಕರ್ನಾಟಕ ಸಂಘವು ಭವಿಷ್ಯದಲ್ಲಿ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ಅಂಕಣಕಾರ ಪ್ರೊ.ವಿಷ್ಣು ಜೋಷಿ ಮಾತನಾಡಿ, ಸಂಸ್ಕೃತದ ಅಧ್ಯಯನದಿಂದ ಕನ್ನಡದಲ್ಲಿ ಪ್ರಭುತ್ವವನ್ನು ಹೊಂದಲು ಸಾಧ್ಯ. ತಾಯಂದಿರು ಸಿನಿಮಾ ಧಾರಾವಾಹಿಗಳಿಂದ ದೂರವಾದಲ್ಲಿ ಮಕ್ಕಳಿಗೆ ತನ್ನಿಂದ ತಾನಾಗಿಯೇ ಸಂಸ್ಕಾರವು ಮೈಗೂಡುತ್ತದೆ ಎಂದರು.
ಹಿರಿಯ ಚಿಂತಕ ಗೌತಮ ಗಾಂವಕರ ತೊರ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಕ್ತಿಗತ ನೆಲೆಯಲ್ಲಿನ ಚಟುವಟಿಕೆಗಳಿಗಿಂತಲೂ ಸಾಂಘಿಕ ಚಟುವಟಿಕೆಗಳು ಪರಿಣಾಮಕಾರಿಯಾಗಿದ್ದು, ಅದು ಸುಸಾಂಘಿಕ ಚಟುವಟಿಕೆ ಯಾಗುವಲ್ಲಿ ಹೇರಿಕೆ ಓಲೈಕೆಗಳಿಗೆ ಅವಕಾಶವನ್ನೊದಗಿಸದೇ ಸಮಷ್ಟಿಯ ಹಿತವನ್ನು ಕಾಯ್ದುಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ನಡೆದ ಶ್ರಾವಣ-ಸ್ವಾತಂತ್ರ್ಯ ಕವಿಗೋಷ್ಠಿಯಲ್ಲಿ ಪ್ರೊ.ವಿಷ್ಣು ಜೋಷಿ, ಡಿ.ಡಿ.ಪಿ.ಆಯ್ ಪುಂಡಲೀಕ, ಶಿವಾಬಾಬಾ ನಾಯ್ಕ, ಪ್ರೊ. ಪುಷ್ಪಾ ಪ್ರಭಾಕರ, ರೇಣುಕಾ ರಮಾನಂದ, ಜಿ.ಯು.ನಾಯಕ, ಪ್ರೊ. ನಾಗೇಶದೇವ ಅಂಕೋಲೆಕರ ಹಾಗೂ ಸಾತು ಗೌಡ ಸ್ವರಚಿತ ಕವನಗಳನ್ನು ವಾಚಿಸಿದರು.
ನವ ಕರ್ನಾಟಕ ಸಂಘದ ಅಧ್ಯಕ್ಷ ಮಂಜುನಾಥ ಗಾಂವಕರ ಬರ್ಗಿ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸುಧಾ ಶೆಟ್ಟಿ ಪ್ರಾರ್ಥಿಸಿದರು. ನಿರುಪಮಾ ಶ್ಯಾಮಸುಂದರ ನಿರೂಪಿಸಿದರು. ಜಿ.ಆರ್. ತಾಂಡೇಲ್ ಸಂದೇಶ ವಾಚಿಸಿದರು. ಸಂಘಟನೆಯ ಕಾರ್ಯದರ್ಶಿ ಶ್ಯಾಮಸುಂದರ ಗೌಡ ವಂದಿಸಿದರು.
ಸಭೆಯಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ನಾಯಕ, ಸಾಹಿತಿ ವಿಷ್ಣು ನಾಯ್ಕ, ಶಾಂತಾರಾಮ ನಾಯಕ ಹಿಚ್ಕಡ, ಡಾ. ಆರ್.ಜಿ.ಗುಂದಿ, ಪ್ರೊ. ಮೋಹನ ಹಬ್ಬು, ಕೃಷ್ಣ ನಾಯಕ ಹಿಚ್ಕಡ, ನಾಗೇಂದ್ರ ತೊರ್ಕೆ, ಶಫಿ ಮಾಸ್ತರ್, ವೆಂಟು ಮಾಸ್ತರ್ ಶೀಳ್ಯ ಮತ್ತಿತರರು ಉಪಸ್ಥಿತರಿದ್ದರು.