×
Ad

ದಲಿತರು-ಅಲ್ಪಸಂಖ್ಯಾತರ ಮೇಲಿನ ದಾಳಿ ದೇಶದ ಅಭಿವೃದ್ಧಿಗೆ ಮಾರಕ: ಡಾ.ಮನ್ಝೂರ್ ಆಲಂ

Update: 2016-08-29 23:32 IST

ಕಲಬುರಗಿ, ಆ.29: ದಲಿತರು ಹಾಗೂ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ದೌರ್ಜನ್ಯಗಳು ದೇಶದ ಅಭಿವೃದ್ಧಿಗೆ ಮಾರಕವಾದದ್ದು ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಮುಹಮ್ಮದ್ ಮನ್ಝೂರ್ ಆಲಂ ಅಭಿಪ್ರಾಯಪಟ್ಟಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೆಲವು ಸಂಘಟನೆಗಳು ಹಾಗೂ ಪ್ರಭಾವಿಗಳು ದೇಶದ ಕಾನೂನಿಗೆ ಗೌರವ ನೀಡದೆ ಮುಂದುವರಿಯುತ್ತಿರುವ ಕಾರಣದಿಂದಾಗಿ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ಹಲ್ಲೆಗಳು, ದೌರ್ಜನ್ಯಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ದೇಶದ ಪ್ರಗತಿ ಕಷ್ಟಸಾಧ್ಯ ಎಂದು ಅವರು ಹೇಳಿದರು.
 ‘ದಲಿತರನ್ನು ಕೊಲ್ಲುವ ಬದಲು ನನ್ನನ್ನು ಕೊಲ್ಲಿ’ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿಕೆ ನೀಡುವ ಬದಲು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನಿನ ವಿರುದ್ಧವಾಗಿ ನಡೆಯುವಂತವರು ಯಾರೂ ಎಷ್ಟೇ ದೊಡ್ಡವರಾದರೂ ಕ್ರಮ ಜರಗಿಸಲಾಗುವುದೆಂದು ಎಚ್ಚರಿಕೆ ನೀಡಬೇಕಿತ್ತು ಎಂದು ಮನ್ಝೂರ್ ಆಲಂ ಅಭಿಪ್ರಾಯಪಟ್ಟರು.
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಂತಹ ಪ್ರಜಾಸತ್ತಾತ್ಮಕ ದೇಶದಲ್ಲಿ ಶಾಂತಿ, ಸೌಹಾರ್ದ ನಿರ್ಮಾಣವಾಗದೆ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಸತ್ಯವನ್ನು ಕೇಂದ್ರ ಸರಕಾರ ಅರ್ಥಮಾಡಿಕೊಳ್ಳಬೇಕು. ಆದರೆ, ದೇಶಭಕ್ತಿ ಬಗ್ಗೆ ಸಂಘಪರಿವಾರ ಮತ್ತು ಬಿಜೆಪಿ ಜನತೆಯಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಶ್ಮೀರದ ಜನತೆಯನ್ನು ಕಡೆಗಣಿಸಿ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಈ ಹಿಂದೆ ಹೇಳಿಕೆ ನೀಡಿದ್ದರು. ಕೇಂದ್ರ ಸರಕಾರವು ಅಲ್ಲಿನ ಸಂಘ, ಸಂಸ್ಥೆಗಳು, ಜನಪ್ರತಿನಿಧಿಗಳ ಅಭಿಪ್ರಾಯವನ್ನು ಕೇಳುವ ತಾಳ್ಮೆ ವಹಿಸಬೇಕು ಎಂದು ಮನ್ಝೂಲ್ ಆಲಂ ಸಲಹೆ ನೀಡಿದರು.
ಕಾಶ್ಮೀರದಲ್ಲಿ 50 ದಿನಗಳಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಒಂದು ಪ್ರದೇಶದಲ್ಲಿ ಇಷ್ಟೊಂದು ಸುದೀರ್ಘ ಅವಧಿಗೆ ನಿಷೇಧಾಜ್ಞೆ ಜಾರಿಗೊಳಿಸಿರುವುದು ಜಗತ್ತಿನಲ್ಲಿ ಇದೇ ಮೊದಲು. ಕಾಶ್ಮೀರದಲ್ಲಿ ಸೈನಿಕರು, ನಾಗರಿಕರು ಸಾವಿಗೀಡಾಗುವುದನ್ನು ಸರಕಾರ ತಡೆಯಬೇಕು. ಯಾವುದೇ ಕಾರಣಕ್ಕೂ ನಾಗರಿಕರ ಮೇಲೆ ಪಾಲೆಟ್‌ಗನ್ ಬಳಕೆ ಮಾಡಲು ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದರು.
ನಿರ್ಣಯಗಳು: ದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು. ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು. ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನವನ್ನು ಮುಂದುವರಿಸಬೇಕು ಎಂಬುದು ಸೇರಿದಂತೆ ಅನೇಕ ನಿರ್ಣಯಗಳನ್ನು ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಳ್ಳಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಅಧ್ಯಕ್ಷ ಹಕೀಮ್ ಅಬ್ದುಲ್ ಮುಗೈಸಿ, ಉಪಾಧ್ಯಕ್ಷ ಮುಹಮ್ಮದ್ ಅಸ್ರಾರುಲ್ ಹಕ್, ಮಾಜಿ ಸಚಿವ ಡಾ.ಖಮರುಲ್ ಇಸ್ಲಾಮ್,ರಾಜ್ಯಾಧ್ಯಕ್ಷ ವೌಲಾನ ಎಜಾಝ್ ಅಹ್ಮದ್ ನದ್ವಿ, ಉಪಾಧ್ಯಕ್ಷ ಸುಲೈಮಾನ್‌ಖಾನ್, ಕೆಡಿಎ ಅಧ್ಯಕ್ಷ ಮುಹಮ್ಮದ್ ಅಸ್ಗರ್ ಚುಲ್‌ಬುಲ್, ಮುಖಂಡರಾದ ಮುಫ್ತಿ ಬಾಖರ್ ಅರ್ಶದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News