ಕಾರ್ಮಿಕ ವಿರೋಧಿ ನೀತಿ ವಿರುದ್ಧ ಹೋರಾಟ ಅಗತ್ಯ: ಚಿನ್ನಪ್ಪಕೊಟ್ರಿಕಿ
ಚಿಕ್ಕಮಗಳೂರು, ಆ.30: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡುವುದರ ಮೂಲಕ ಕಾರ್ಮಿಕ ದಂಗೆಗಳಿಗೆ ಹೆಗಲೊಡ್ಡಲು ಮುಂದಾಗಬೇಕೆಂದು ಟಿಯುಸಿಐ ರಾಜ್ಯ ಉಪಾಧ್ಯಕ್ಷ ಚಿನ್ನಪ್ಪಕೊಟ್ರಿಕಿ ಕರೆ ನೀಡಿದರು.
ಅವರು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ಚಿಕ್ಕಮಗಳೂರು ಜಿಲ್ಲಾ ಸಮಿತಿ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ನಾಲ್ಕನೆ ಜಿಲ್ಲಾ ಸಮ್ಮೇಳನವನ್ನುAITUC, CITU, NITUCತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸಲು ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಮಾಲಕತ್ವದ ವಿರುದ್ಧ ಕಾರ್ಮಿಕ ದಂಗೆಗಳನ್ನು ಸಂಘಟಿಸಬೇಕಾಗಿದೆ. ದಂಗೆಗಳಿಗೆ ಹೆಗಲೊಡ್ಡಿ ಕಾರ್ಮಿಕ ವರ್ಗದ ಐಕ್ಯತೆಯನ್ನು, ಕಾರ್ಮಿಕ ವರ್ಗದ ಹಕ್ಕುಗಳನ್ನು ದಕ್ಕಿಸಿಕೊಳ್ಳುವ ಕ್ರಾಂತಿಕಾರಿ ಕಾರ್ಯಭಾರಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. ಸೆಪ್ಟಂಬರ್ 2ರ ಅಖಿಲ ಭಾರತ ಮುಷ್ಕರವನ್ನು ಬೃಹತ್ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಮುಂದಾಗಬೇಕಾಗಿದೆ ಎಂದು ತಿಳಿಸಿ ಕಾರ್ಮಿಕರನ್ನು ಪ್ರತಿನಿಧಿಸುವ ಸಂಘಟನೆಗಳಾದ , ಇನ್ನಿತರ ಕಾರ್ಮಿಕ ಸಂಘಟನೆಗಳು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಾ ಆಳುವ ವರ್ಗಕ್ಕೆ ಸೇವೆಗೈಯ್ಯುತಿದ್ದು ಇಂತಹ ಕಾರ್ಮಿಕ ಸಂಘಟನೆಗಳಿಂದ ಹೊರಬಂದು ರಾಜಿರಹಿತ ಕ್ರಾಂತಿಕಾರಿ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು.
ಟಿಯುಸಿಐ ಜಿಲ್ಲಾಧ್ಯಕ್ಷ ಸಿ.ಜೆ.ಜಗನ್ನಾಥ್ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರದಲ್ಲಿ ಆಳುವ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುವುದರ ಮೂಲಕ ಅಪಾಯಕಾರಿ ಬೆಳವಣಿಗೆಗೆ ಕಾರಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂಡವಾಳ ಶಾಹಿಗಳ ಪರವಾದ ನೀತಿಗಳನ್ನು ಜಾರಿಗೆ ಮಾಡುವುದರ ಮೂಲಕ ಜನದ್ರೋಹ ಮಾಡುತ್ತಾ ಬಿಜೆಪಿಯೊಂದಿಗೆ ಸ್ಪರ್ಧೆಗಿಳಿದಿದೆ ಎಂದು ತಿಳಿಸಿ ಒಟ್ಟಾರೆ ಕೇಂದ್ರ ಮತ್ತು ರಾಜ್ಯದ ಪರಿಸ್ಥಿತಿಗಳಲ್ಲಿ ಗಮನಾರ್ಹವಾದ ವ್ಯತ್ಯಾಸಗಳಿಲ್ಲದಂತಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಉದ್ಭವಿಸಿರುವ ಭೂಮಿ, ವಸತಿ, ನಿವೇಶನ ಮತ್ತು ಮೂಲಭೂತ ಸೌಕರ್ಯಗಳಂತಹ ಇನ್ನಿತರ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಮಿಕರನ್ನು ಸಂಘಟಿಸುವುದರ ಮೂಲಕ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು.
ಟಿಯುಸಿಐ ಜಿಲ್ಲಾ ಕಾರ್ಯದರ್ಶಿ ಹಾಂದಿ ವಿಜಯ್, ಟಿಯುಸಿಐ ಜಿಲ್ಲಾ ಉಪಾಧ್ಯಕ್ಷ ಬೆಳಗೋಡು ಗೋಪಾಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಟಿಯುಸಿಐನ ಆವತಿ ವೆಂಕಟೇಶ್ ನಿರೂಪಿಸಿ, ಬೊಗಸೆ ನಾಗೇಶ್ ಸ್ವಾಗತಿಸಿ, ಸಿ.ಎಚ್.ಪರಮೇಶ್ ವಂದಿಸಿದರು. ಲೋಕೇಶ್, ಪುಟ್ಟಸ್ವಾಮಿ ಬಾಳೆಹೊನ್ನೂರು, ಶಿವಣ್ಣ, ಪರಮೇಶ್, ಚಂದ್ರಶೇಖರ್, ಸಾವಿತ್ರಿ, ಲೋಕೇಶ್, ಆನಂದ್ ಆಲ್ದೂರ್, ಮೂಡಿಗೆರೆಯ ಸಂತೋಷ್, ವಿಠಲ್, ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು. ಸಮ್ಮೇಳನದ ಆರಂಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು. ನಂತರ ಹುತಾತ್ಮ ಸಂಗಾತಿಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ಕ್ರಾಂತಿಗೀತೆ ಹಾಡುವುದರ ಮೂಲಕ ಘೋಷಣೆಗಳನ್ನು ಮೊಳಗಿಸುವುದರೊಂದಿಗೆ 4ನೆ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.