ನಿವೇಶ ರಹಿತರಿಗೆ ಜಾಗ ನೀಡುವ ವಿವಾದ ತಾರಕಕ್ಕೆ
ಕಡೂರು, ಆ.30: ತಂಗಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸೇಂದಿ ವನವನ್ನು ನಿವೇಶನ ರಹಿತರಿಗೆ ನೀಡುವ ವಿಚಾರವಾಗಿ ಪರ-ವಿರೋಧದ ವಾಗ್ವಾದದಿಂದ ಗ್ರಾಮ ಸಭೆಯನ್ನು ಅಧ್ಯಕ್ಷ ಟಿ.ಟಿ. ಶ್ರೀನಿವಾಸ್ ಮುಂದೂಡಿದ ಘಟನೆ ಮಂಗಳವಾರ ನಡೆಯಿತು.
ತಾಲೂಕಿನ ತಂಗಲಿ ಗ್ರಾಪಂ ಗ್ರಾಮ ಸಭೆಯನ್ನು ಗ್ರಾಮದ ಸಮುದಾಯಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಗಂಗಾಧರ ನಾಯಕ್ ತಂಗಲಿ ಗ್ರಾಮದಲ್ಲಿರುವ ಸೇಂದಿವನದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕು, ಇದಕ್ಕಾಗಿ ನಿವೇಶನ ರಹಿತರಿಂದ ಅರ್ಜಿ ಪಡೆಯುವಂತೆ ಸಭೆಯಲ್ಲಿ ತಿಳಿಸಿದರು.
ಈ ವಿಷಯ ಮಂಡಿಸುತ್ತಿದ್ದಂತೆ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಗಣೇಶ್, ಸರ್ವೇ ನಂಬರ್ 245 ರಲ್ಲಿ 7 ಎಕರೆ 34 ಗುಂಟೆ ಸೇಂದಿವನದ ಜಾಗವಿದೆ, ಈ ಜಾಗವನ್ನು ರಾಜಕೀಯ ಲಾಭಕ್ಕಾಗಿ ಕೆಲವರಿಗೆ ನೀಡದಂತೆ ಆಗ್ರಹಿಸಿದರು.
ಈ ಸ್ಥಳದಲ್ಲಿ ಗ್ರಾಮದ ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಗೋಮಾಳಕ್ಕೆ ಜಾಗ ಮೀಸಲಿರಿಸಿ ಉಳಿದ ಜಾಗವನ್ನು ಗ್ರಾಮದ ಎಲ್ಲ ಸಮುದಾಯಗಳ ವಸತಿ ರಹಿತರನ್ನು ಗುರುತಿಸಿ ಸರಕಾರದ ಆದೇಶ ಬಂದರೆ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಾಗ್ವಾದ ನಡೆದುದರಿಂದ ಅಧ್ಯಕ್ಷ ಟಿ.ಟಿ. ಶ್ರೀನಿವಾಸ್ ವಿವಾದದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡುವುದಾಗಿ ತಿಳಿಸಿ ಸಭೆಯನ್ನು ಮುಂದೂಡಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ವಿಚಾರ ಕಂದಾಯ ಇಲಾಖೆಗೆ ಕಳುಹಿಸಲಾಗುವುದು, ಸರಕಾರದ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಂತರ ಸದಸ್ಯ ಗಂಗಾಧರನಾಯ್ಕ ಮಾತನಾಡಿ, ನಿವೇಶನ ರಹಿತರಿಗೆ ನಿವೇಶನ ನೀಡಲು ಪಟ್ಟಿ ತಯಾರಿಸುವ ಉದ್ದೇಶದಿಂದ ಗ್ರಾಮ ಸಭೆಯನ್ನು ಕರೆಯಲಾಗಿತ್ತು, ಈ ಸಭೆಯಲ್ಲಿ ಕೆಲವರು ಗೋಮಾಳಕ್ಕಾಗಿ ಆಗ್ರಹಿಸಿದ್ದಾರೆ, ನಮ್ಮ ಉದ್ದೇಶ ಎಲ್ಲ ಜನಾಂಗದ ಸ್ಥಳೀಯ ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿದೆ, ಈ ಪಟ್ಟಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು. ನಿರ್ಧಾರ ಸರಕಾರಕ್ಕೆ ಬಿಟ್ಟದ್ದು ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಆರ್. ಅರುಂಧತಿಯವರನ್ನು ವಿಚಾರಿಸಿದಾಗ ಪಂಚಾಯತ್ ವ್ಯಾಪ್ತಿಯ ತಂಗಲಿ ಗ್ರಾಮದಲ್ಲಿ 120 ವಸತಿ ರಹಿತರಿದ್ದು ಇವರ ಪಟ್ಟಿ ತಯಾರಿಸಲಾಗಿದೆ, ಇದಕ್ಕೆ ಅನುಮೋದನೆ ಪಡೆಯಲು ಗ್ರಾಮ ಸಭೆಯನ್ನು ಕರೆಯಲಾಗಿತ್ತು, ವಿವಾದದ ಹಿನ್ನೆಲೆೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ ಎಂದರು.
ತಾಪಂ ಸದಸ್ಯೆ ಸವಿತಾ ಆನಂದ್, ಉಪಾಧ್ಯಕ್ಷೆ ಆರ್. ರಜಿನಿ, ಸದಸ್ಯರಾದ ಧನಪಾಲ್‌ನಾಯ್ಕ, ಪೂರ್ಣಿಮಾಬಾಯಿ, ಲೋಕೇಶ್, ಶಮೀಮ್, ಪವಿತ್ರಾ, ಹನುಮಂತರಾಜ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.