ಟೋಕನ್ ಪದ್ಧತಿ ಹಿಂಪಡೆಯಲು ಆಗ್ರಹ

Update: 2016-08-30 16:41 GMT

 ಕಾರವಾರ, ಆ.30: ಪಡಿತರ ವಿತರಣೆಯಲ್ಲಿ ರಾಜ್ಯ ಸರಕಾರವು ಜಾರಿಗೆ ತಂದಿರುವ ಟೋಕನ್ ಮತ್ತು ಎಸ್ಸೆಮ್ಮೆಸ್ ಪದ್ಧತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಗ್ರಾಮೀಣ ಮತ್ತು ನಗರ ನ್ಯಾಯ ಬೆಲೆ ಅಂಗಡಿಕಾರರ ಒಕ್ಕೂಟವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

 ಮನವಿ ಸಲ್ಲಿಸಿ ಮಾತನಾಡಿದ ನ್ಯಾಯ ಬೆಲೆ ಅಂಗಡಿಕಾರರ ಒಕ್ಕೂಟದ ಅಧ್ಯಕ್ಷ ಮತ್ತು ಸಿಇಒ ವಿಎಸ್‌ಎಸ್. ಚೆಂಡಿಯಾ, ಸರಕಾರ ಪಡಿತರ ವಿತರಣೆಯಲ್ಲಿ ಆಗುತ್ತಿರುವ ಅಕ್ರಮವನ್ನು ನಿಯಂತ್ರಿಸುತ್ತಿರುವುದು ಶ್ಲಾಘನೀಯ. ಆದರೆ, ಹೊಸದಾಗಿ ಜಾರಿಗೆ ತಂದಿರುವ ಟೋಕನ್ ಮತ್ತು ಎಸ್ಸೆಮ್ಮೆಸ್ ಪದ್ಧತಿಯಿಂದ ರೇಶನ್ ಕಾರ್ಡ್‌ದಾರರು ಹಾಗೂ ನ್ಯಾಯ ಬೆಲೆ ಅಂಗಡಿಕಾರರ ಮಧ್ಯೆ ಸಂಘರ್ಷ ಉಂಟಾಗುತ್ತಿದೆ ಎಂದು ಹೇಳಿದರು.

  ಎಸ್ಸೆಮ್ಮೆಸ್ ಮಾಡುವಾಗ ಕೆಲ ಪ್ರದೇಶಗಳಲ್ಲಿ ಸಿಗ್ನಲ್ (ರೇಂಜ್) ಸರಿಯಾಗಿ ಸಿಗುವುದಿಲ್ಲ. ಪ್ರತಿಯೊಬ್ಬ ಪಡಿತರರಿಂದ ರೇಶನ್ ವಿತರಣೆಯ ಒಪ್ಪಿಗೆ ಸಂದೇಶವನ್ನು ಪಡೆದು ಪಡಿತರ ವಿತರಣೆ ಮಾಡಬೇಕಾಗಿರುವುದರಿಂದ 1ಕಾರ್ಡ್‌ಗೆ ಕನಿಷ್ಠ 30 ರಿಂದ 40 ನಿಮಿಷ ವ್ಯಯವಾಗುತ್ತಿದೆ.

 ಅಲ್ಲದೇ ನಮ್ಮ ಸಹಕಾರಿ ಸಂಘಗಳು ಸಂಭಾವನೆ ಪಡೆಯದೆ ಸೇವೆಯ ದೃಷ್ಟಿಯಲ್ಲಿ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕಾರ್ಡ್‌ದಾರರೊಂದಿಗೂ ಹಾಗೂ ಸಾರ್ವಜನಿಕರೊಂದಿಗೆ ಯಾವುದೇ ಲೋಪದೋಷವಿಲ್ಲದೆ ಕಳೆದ 35-40 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಸರಕಾರದ ಈಗಿನ ದಿನಕ್ಕೊಂದು ಬದಲಾಗುತ್ತಿರುವ ಆದೇಶದಿಂದ ಕಾರ್ಯ ನಿರ್ವಹಿಸಲು ಸಂಘದಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ. ಪಡಿತರ ವಿತರಣೆಗಾಗಿಯೇ ಇಬ್ಬರು ಸಿಬ್ಬಂದಿಯನ್ನು ಸರಕಾರವೇ ನೇಮಕ ಮಾಡಬೇಕು. ಈಗಿನ ರೇಶನ್ ಪದ್ಧತಿಯಿಂದ ಆಗುತ್ತಿರುವ ತಾಂತ್ರಿಕ ತೊಂದರೆ ಹಾಗೂ ಅನಾವಶ್ಯಕ ಸಮಯ ವ್ಯರ್ಥವನ್ನು ಖಂಡಿಸಿ, ಕಾರವಾರ ತಾಲೂಕಿನ ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲ್ಲ 46 ನ್ಯಾಯಬೆಲೆ ಅಂಗಡಿಕಾರರು ಅಕ್ಟೋಬರ್ ತಿಂಗಳಿನಿಂದ ರೇಶನ್ ಎತ್ತುಗಡೆ ಮಾಡುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

  ಕಳೆದ ಎರಡು ತಿಂಗಳುಗಳ ಹಿಂದೆಯೇ ಈ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗಿತ್ತು. ಆದರೆ ಈವರೆಗೂ ಸರಕಾರದಿಂದ ಯಾವುದೇ ಉತ್ತರ ಬಂದಿರುವುದಿಲ್ಲ. ಸರಕಾರ ಹೊಸ ಪದ್ಧತಿಯನ್ನು ಹಿಂಪಡೆಯದಿದ್ದಲ್ಲಿ ಮುಂದೆ ಸಂಭವಿಸಬಹುದಾದ ಯಾವುದೇ ತೊಂದರೆ, ತೊಡಕುಗಳಿಗೆ ನ್ಯಾಯಬೆಲೆ ಅಂಗಡಿಕಾರರು ಹೊಣೆಗಾರರಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 ಸರಕಾರವು ಈ ಎಲ್ಲ ಅಡೆತಡೆಗಳನ್ನು ನಿವಾರಿಸಿ ಹಿಂದಿನ ಪದ್ಧತಿಯನ್ನೇ ಜಾರಿಗೆ ತರಬೇಕು ಎಂದು ಗ್ರಾಮೀಣ ಮತ್ತು ನಗರ ನ್ಯಾಯ ಬೆಲೆ ಅಂಗಡಿಕಾರರ ಒಕ್ಕೂಟವು ಮನವಿಯಲ್ಲಿ ಒತ್ತಾಯಿಸುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News