×
Ad

ಮಾಜಿ ಎಂಎಲ್ಸಿ ವಿರುದ್ಧ ಶಿಷ್ಟಾಚಾರ ಉಲ್ಲಂಘನೆಯ ಆರೋಪ: ಖಂಡನೆ

Update: 2016-08-30 22:12 IST

ಚಿಕ್ಕಮಗಳೂರು, ಆ.30: ಹಿಂದುಳಿದ ವರ್ಗದ ಮಹಿಳೆ ಎಂಬ ಕಾರಣಕ್ಕಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆಯ ವಿರುದ್ಧ ಬಿಜೆಪಿ ಎಂಎಲ್ಸಿ ಹಾಗೂ ಶಾಸಕರು ಜಿಪಂ ಕೆಡಿಪಿ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ಕೆ.ಎಂ. ನಾಗರಾಜ್, ಜಿಲ್ಲಾ ಕಾಂಗ್ರೆಸ್ ಸೇವಾದಳ ಮುಖ್ಯ ಸಂಘಟಕ ಕೆ.ಆನಂದ ಕುಮಾರ್ ಆರೋಪಿಸಿದ್ದಾರೆ.

 ಸೋಮವಾರ ಜಿಪಂನಲ್ಲಿ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆೆಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕುರಿತು ಚರ್ಚಿಸದೆ ಶಿಷ್ಟಾಚಾರದ ಬಗ್ಗೆ ಮಾತನಾಡಿರುವ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ವರ್ತನೆ ಹಾಸ್ಯಾಸ್ಪದವಾಗಿದೆ ಎಂದ ಅವರು ಜಂಟಿ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಈಗ ಶಿಷ್ಟಾಚಾರದ ಬಗ್ಗೆ ಆರೋಪ, ಟೀಕೆ ಮಾಡುತ್ತಿರುವ ಶಾಸಕರು ಈ ಹಿಂದೆ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದ ಸಂದರ್ಭಗಳಲ್ಲಿ ವೌನ ವಹಿಸುತ್ತಿದ್ದುದು ಏಕೆ ಎಂಬ ಸಂಶಯಗಳು ಈಗ ನಮ್ಮನ್ನು ಕಾಡುತ್ತಿವೆ. ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಜಿಲ್ಲೆಯಾದ್ಯಂತ ಸಂಚರಿಸಿ ಲವಲವಿಕೆಯಿಂದ ಓಡಾಡುತ್ತಿರುವುದು ಮತ್ತು ಜನರಿಗೆ ಸ್ಪಂದಿಸುತ್ತಿರುವುದನ್ನು ನೋಡಿ ಸಹಿಸಿಕೊಳ್ಳಲಾಗದೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಕೆಡಿಪಿ ಸಭೆೆಯಲ್ಲಿ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಗರಸಭೆ ವ್ಯಾಪ್ತಿಯ ಪಾರ್ವತಿಪುರದಲ್ಲಿ ಮೂಡಿಗೆರೆ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ವರ್ಷ 1.20 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆಯನ್ನು ಸ್ಥಳೀಯ ಶಾಸಕರು ಸರ್ವಾಧಿಕಾರಿಯಂತೆ ಉದ್ಘಾಟಿಸುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಸಖರಾಯಪಟ್ಟಣ-ಬಾಣಾವರ ರಸ್ತೆ ಸರಕಾರಿ ಅನುದಾನದಿಂದ ಅಭಿವೃದ್ಧಿಪಡಿಸಿದ್ದನ್ನು ಶಾಸಕರು ತಮ್ಮ ಬೆಂಬಲಿಗರೊಂದಿಗೆ ಉದ್ಘಾಟಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶೃಂಗೇರಿ ವಿಧಾನ ಸಭಾ ಕ್ಷೇತ್ರ, ಮೂಡಿಗೆರೆ ವಿಧಾನಸಭಾ ಕ್ಷೇತ್ರ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ, ಉದ್ಘಾಟನೆ ಸಂದರ್ಭಗಳಲ್ಲಿ ಈ ಹಿಂದೆ ಎಂಎಲ್ಸಿ ಅವರನ್ನು ಕಡೆಗಣಿಸಿದ್ದು ಶಿಷ್ಟಾಚಾರ ಉಲ್ಲಂಘನೆಯಲ್ಲವೇ? ಇಂತಹ ಹತ್ತಾರು ಶಿಷ್ಟಾಚಾರ ಉಲ್ಲಂಘನೆಯ ಪ್ರಕರಣಗಳನ್ನು ನಾವು ಕಂಡಿದ್ದೇವೆ. ಆಗ ಶಿಷ್ಟಾಚಾರ ಗಮನಕ್ಕೆ ಬರಲಿಲ್ಲವೇ ಎಂದು ಶಾಸಕರಿಗೆ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News