×
Ad

ಕುಶಾಲನಗರ: ಸ್ವಸಾಮರ್ಥ್ಯದಿಂದ ಮಹಿಳೆಯರ ವಿಕಸನ

Update: 2016-08-30 22:13 IST

ಕುಶಾಲನಗರ, ಆ 30: ಮಹಿಳೆಯರು ಸಂಘಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಸಾಮಾಜಿಕ ಜ್ಞ್ಞಾನ ಗಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಕುಶಾಲನಗರ ಪೊಲೀಸ್ ಉಪ ಅಧೀಕ್ಷಕ ಟಿ.ಕುಮಾರ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟದ ಕುಶಾಲನಗರ ಎ ಮತ್ತು ಬಿ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕವಾಗಿ ಮಹಿಳೆಯರು ಸದೃಢರಾಗಿರುವ ಕಾರಣ ಸಾಂಸಾರಿಕ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ಸಫಲರಾಗುತ್ತಾರೆ.

ಈ ಸಾಮರ್ಥ್ಯದ ಮೂಲಕ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಸಾಧನೆಗೈಯುತ್ತಿರುವುದು ಕಾಣಬಹುದಾಗಿದೆ. ಮಹಿಳೆಯರು ಸಂಘಟಿತರಾಗಿ ಸಾಮಾಜಿಕ ವ್ಯವಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಕೂಡಿಗೆ ಡಯಟ್ ಉಪನ್ಯಾಸಕಿ ಸಾವಿತ್ರಿ ಅವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದಾಲೋಚನೆ, ಚರ್ಚೆ ಹಾಗೂ ಸ್ವಂತ ತೀರ್ಮಾನಗಳ ಮೂಲಕ ವಿಕಸಿತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ತಾಲೂಕು ಯೋಜನಾಧಿಕಾರಿ ವೈ.ಪ್ರಕಾಶ್ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸರಿಸಮಾನವಾದ ಗೌರವ ಹಾಗೂ ಮಾನ್ಯತೆ ದೊರಕಿದಲ್ಲಿ ಮಾತ್ರ ಮಹಿಳೆ ಸಬಲೀಕರಣ ಸಾಧ್ಯ ಎಂದರು.

ಕುಶಾಲನಗರ ತಾಪಂ ಅಧ್ಯಕ್ಷ ಎಂ.ಎಂ.ಚರಣ್, ಆಹಾರ ಸಂರಕ್ಷಣಾ ಅಭಿಯಾನ ಸಂಚಾಲಕ ಎನ್.ಕೆ.ಮೋಹನ್‌ಕುಮಾರ್, ನಂಜರಾಯಪಟ್ಟಣದ ಸಮಾಜ ಸೇವಕಿ ಮುತ್ತಮ್ಮ ವೇದಿಕೆ ಮಾತನಾಡಿದರು.

ಇದೇ ಸಂದರ್ಭ ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿತು.

ಯೋಜನೆಯ ಮೇಲ್ವಿಚಾರಕರಾದದ ಚಂದ್ರಶೇಖರ್, ಸೇವಾ ಪ್ರತಿನಿಧಿಗಳಾದ ಚಂದ್ರಾವತಿ, ವಿಜಯಲಕ್ಷ್ಮೀ ಡಾಟಿ, ಕೀರ್ತನಾ, ಒಕ್ಕೂಟಗಳ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ರೂಪ ಪ್ರಾರ್ಥಿಸಿದರು. ಸುಪ್ರಿಕಾ ಒಕ್ಕೂಟದ ವರದಿ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News