×
Ad

ಯುವಜನತೆ ಮೂಲ ಸಂಸ್ಕೃತಿಯನ್ನು ಮೆಗೂಡಿಸಿಕೊಳ್ಳಲಿ: ಡಾ.ನಲ್ಲೂರು ಪ್ರಸಾದ್

Update: 2016-08-30 22:23 IST

ಕುಶಾಲನಗರ, ಆ.30: ಪೂರ್ವಿಕರು ಅವಿದ್ಯಾವಂತರಾದರೂ ಮೂಲ ಸಂಸ್ಕೃತಿ ಪರಂಪರೆಯನ್ನು ಮತ್ತು ಜನಪದ ಕಲೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಹೇಳಿದರು.

ಅವರು ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜರಗಿದ ಮುಂಗಾರು ಸಂಪದ ಸಾಹಿತ್ಯ ಲೋಕಕ್ಕೆ ಅನ್ನದಾತರ ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೊಲದಲ್ಲಿ ಉಳುಮೆ ಮಾಡುವಾಗ, ಎತ್ತಿನ ಗಾಡಿಯನ್ನು ಓಡಿಸುವಾಗ, ಬೀಸುವ ಕಲ್ಲಿನಲ್ಲಿ ರಾಗಿಯನ್ನು ಬೀಸುವಾಗ, ಭತ್ತವನ್ನು ಕುಟ್ಟುವಾಗ ಅವರ ಬಾಯಿಗಳಲ್ಲಿ ಜನಪದ ಹಾಡುಗಳು ಲಯಬದ್ಧವಾಗಿ ನಲಿದಾಡುತ್ತಿದ್ದವು. ಅಂತಹ ಗೀತೆಗಳನ್ನು ಕೇಳಲು ಬಹಳ ಸೊಗಸು. ಆದರೆ ಇಂದಿನ ಯುವಕರು ಚಲನಚಿತ್ರ ಗೀತೆಗಳಿಗೆ ಮಾರುಹೋಗಿ ಜನಪದ ಸೊಗಡನ್ನು ಪೋಷಿಸುವವರ ಸಂಖ್ಯೆ ವಿರಳವಾಗಿದೆ. ಇನ್ನಾದರೂ ಇಂದಿನ ವಿದ್ಯಾವಂತ ಯುವ ಪೀಳಿಗೆಯು ಮೂಲ ಸಂಸ್ಕೃತಿ ಆಚಾರ-ವಿಚಾರಗಳನ್ನು ಬೆಳೆಸುವ ಸಲುವಾಗಿ ಜನಪದವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ದೇಶದ ಬೆನ್ನೆಲುಬಾದ ರೈತರಿಗೆ ಜನಪದ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ಬಹಳ ವಿಶೇಷ ಎಂದರು.

ಇಂದು ಕನ್ನಡವನ್ನು ಮಾತನಾಡಿದರೆ ಅಲ್ಪಪ್ರಮಾಣದ ವಿದ್ಯಾವಂತನೆಂದು, ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಉನ್ನತ ಮಟ್ಟದ ವಿದ್ಯಾವಂತನೆಂದು ತಿಳಿದು, ಅಂತಹವರಿಗೆ ವಿಶೇಷ ಗೌರವ ನೀಡುವುದು ಸರಿಯಲ್ಲ. ಕನ್ನಡ ಮಾಧ್ಯಮದಲ್ಲೇ ಉನ್ನತ ವಿದ್ಯಾಭ್ಯಾಸ ಮಾಡಿದವರಿಗೆ ಸರಕಾರದ ಮಟ್ಟದಲ್ಲಿ ಉನ್ನತ ಹುದ್ದೆಯನ್ನು ನೀಡಬೇಕೆಂದು ತಿಳಿಸಿದರು.

ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಅಧುನಿಕ ಭರಾಟೆಯಲ್ಲಿ ನಮ್ಮ ಪುರಾತನ ಗ್ರಾಮೀಣ ಕ್ರೀಡೆ ನಶಿಸಿ ಹೋಗುತ್ತಿದ್ದು, ಕೃಷಿಯ ಸಾಹಿತ್ಯ ಮತ್ತು ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅದನ್ನು ಪ್ರಪಂಚಕ್ಕೆ ಕಾಣಿಕೆಯಾಗಿ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದುದು ಅನಿವಾರ್ಯವಾಗಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಅಳಗುಳಿ ಮಣೆ, ರಂಗೋಲಿ, ಹಗ್ಗಜಗ್ಗಾಟ, ಆನೆಕಲ್ಲು, ಬಳೆಚೂರು ಆಟ. ಪುರುಷರಿಗಾಗಿ ಹಗ್ಗಜಗಾಟ, ಭಾರ ಹೊತ್ತು ಓಡುವುದು. ಮಕ್ಕಳಿಗಾಗಿ ಕುಂಟೆಬಿಲ್ಲೆ, ಆನೆಕಲ್ಲು, ಲಗೋರಿ, ಬುಗುರಿ, ಅಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಉಳುವ ಹಾಡು, ರಾಗಿ ಬೀಸುವ ಹಾಡು, ನಾಟಿಹಾಡು, ರಂಗಗೀತೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಶಿರಂಗಾಲ ಗ್ರಾಪಂ ಅಧ್ಯಕ್ಷ ಎಸ್.ಸಿ ರಘು, ಕೊ.ಜಿ.ಜನಪದ ಪರಿಷತ್ ಅಧ್ಯಕ್ಷ ಅನಂತಶಯನ, ತಾಪಂ ಸದಸ್ಯರಾದ ಜಯಣ್ಣ, ಕುಶಾಲನಗರ ಘಟಕದ ಕಸಾಪ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ತೊರೆನೂರು ಗ್ರಾಪಂ ಅಧ್ಯಕ್ಷ ದೇವರಾಜ್, ಶಿರಂಗಾಲ ಸ.ಪ.ಪೂ ಪ್ರಾಂಶುಪಾಲ ಎಂ.ಆರ್. ಸುರೇಶ್‌ಕುಮಾರ್, ವೀರಾಜಪೇಟೆ ಕಸಾಪ ಅಧ್ಯಕ್ಷ ಮಧೋಷ್ ಪೂವಯ್ಯ, ಸೋಮವಾರಪೇಟೆ ತಾ.ಜಾನಪದ ಪರಿಷತ್ ಅಧ್ಯಕ್ಷ ಚಂದ್ರಮೋಹನ್, ಮಲ್ಲೇಸ್ವಾಮಿ, ಕುಡೆಕಲ್ ಸಂತೋಷ್, ಎಚ್.ಜೆ. ಜವರಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News