×
Ad

ಸರಕಾರಿ ಸಿಟಿ ಬಸ್ ಡಿಪೋ ನಿರ್ಮಾಣದಲ್ಲಿ ನಿರ್ಲಕ್ಷ್ಯ

Update: 2016-08-30 22:24 IST

ಶಿವಮೊಗ್ಗ, ಆ.30: ಜೆನರ್ಮ್ ಯೋಜನೆಯಡಿ ಶಿವಮೊಗ್ಗದಲ್ಲಿ ಸರಕಾರಿ ಸಿಟಿ ಬಸ್ ಸಂಚರಿಸುತ್ತಿದ್ದರೂ ಇಲ್ಲಿಯವರೆಗೆ ಪ್ರತ್ಯೇಕ ಡಿಪೋ, ವರ್ಕ್‌ಶಾಪ್ ಹಾಗೂ ಬ್ ಟರ್ಮಿನಲ್‌ಗಳನ್ನು ನಿರ್ಮಿಸಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪಅವರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಆಗ್ರಹಿಸಿದೆ.

ಮಂಗಳವಾರ ನಗರದಲ್ಲಿ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್‌ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಾಗೋಡು ತಿಮ್ಮಪ್ಪಅವರಿಗೆ ನಿಜವಾಗಿಯೂ ಸರಕಾರಿ ಸಿಟಿ ಬಸ್ ಸಂಚಾರದ ಬಗ್ಗೆ ಕಾಳಜಿಯಿದ್ದರೆ ಮೊದಲು ಡಿಪೋ, ವರ್ಕ್‌ಶಾಪ್ ಹಾಗೂ ಟರ್ಮಿನಲ್ ನಿರ್ಮಾಣಕ್ಕೆ ಗಮನಹರಿಸಬೇಕು. ನಗರಕ್ಕೆ ಮಂಜೂರಾಗಿರುವ 65 ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜಾಗ ಮಂಜೂರು:

 ನಗರದ ಹೊರವಲಯ ಸಂತೇಕಡೂರು ಗ್ರಾಮದ ಬಳಿ ಸರಕಾರಿ ಸಿಟಿ ಬಸ್ ಡಿಪೋ, ವರ್ಕ್‌ಶಾಪ್‌ಗಳ ನಿರ್ಮಾಣಕ್ಕೆ 7 ಎಕರೆ 4 ಗುಂಟೆ ಜಮೀನನ್ನು ಈ ಹಿಂದಿನ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ಮಂಜೂರು ಮಾಡಿದ್ದಾರೆ. ಜಾಗ ಮಂಜೂರಾಗಿ ಎರಡೂವರೆ ವರ್ಷಗಳಾದರೂ ಕೆಎಸ್ಸಾರ್ಟಿಸಿ ಸಂಸ್ಥೆಯು ಇನ್ನೂ ತನ್ನ ವಶಕ್ಕೆ ಪಡೆದುಕೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು. ಕಾಲಮಿತಿಯೊಳಗೆ ಕೆಎಸ್ಸಾರ್ಟಿಸಿಯು ಜಾಗವನ್ನು ತನ್ನ ವಶಕ್ಕೆ ಪಡೆದು ನಿರ್ಮಾಣ ಕಾರ್ಯ ಆರಂಭಿಸದಿದ್ದರೆ ಮಂಜೂರಾಗಿರುವ ಜಾಗ ರದ್ದಾಗಲಿದೆ. ನಗರ ವ್ಯಾಪ್ತಿಯಲ್ಲಿ ಎಲ್ಲಿಯೂ ಸರಕಾರಿ ಜಾಗ ಸಿಗುವುದಿಲ್ಲ. ಡಿಪೋ,ವರ್ಕ್‌ಶಾಪ್, ಟರ್ಮಿನಲ್‌ಗಳ ವ್ಯವಸ್ಥೆಯಿಲ್ಲದೆ ಪ್ರಸ್ತುತ ಓಡುತ್ತಿರುವ ಬೆರಳೆಣಿಕೆಯ ಸರಕಾರಿ ಸಿಟಿ ಬಸ್‌ಗಳ ಸಂಚಾರವೂ ಸ್ಥಗಿತಗೊಳ್ಳಲಿದೆ ಎಂದರು. ಒಟ್ಟಾರೆ 65 ಬಸ್‌ಗಳ ಓಡಿಸಲು ಅನುಮತಿ ದೊರಕಿದೆ. ಇದೀಗ 20 ಬಸ್‌ಗಳು ಆಗಮಿಸಿದ್ದರೂ 10 ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತಿದೆ. ಪ್ರಸ್ತುತ ಕೆಎಸ್ಸಾರ್ಟಿಸಿಯ ನಿರ್ಲಕ್ಷ್ಯವನ್ನು ಗಮನಿಸಿದರೆ 45 ಬಸ್‌ಗಳ ಆಗಮನ ಸಂಶಯ ಉಂಟು ಮಾಡಿದೆ. ದಾವಣಗೆರೆ ವಿಭಾಗವು ಲಾಭದಲ್ಲಿ ನಡೆಯುತ್ತಿದ್ದರೂ ಸಬೂಬು ಹೇಳುತ್ತಾ ಡಿಪೋ ಜಾಗಕ್ಕೆ 22 ಲಕ್ಷ ರೂ. ಪಾವತಿಸದೇ ವಿಳಂಬ ಮಾಡುತ್ತಿದೆ ಎಂದು ದೂರಿದರು. ಕಚೇರಿ ಸ್ಥಾಪಿಸಿ: ಸಾಗರ, ಶಿವಮೊಗ್ಗ, ಭದ್ರಾವತಿ ಮತ್ತು ಹೊನ್ನಾಳಿ ಡಿಪೋಗಳನ್ನು ಸೇರಿಸಿ ಶಿವಮೊಗ್ಗ ನಗರದಲ್ಲಿ ವಿಭಾಗೀಯ ಕಚೇರಿಯನ್ನು ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸರಕಾರದೊಂದಿಗೆ ಚರ್ಚೆ ನಡೆಸಬೇಕು ಎಂದು ಕಲ್ಲೂರು ಮೇಘರಾಜ್ ಆಗ್ರಹಿಸಿದರು. ಗೋಷ್ಠಿಯಲ್ಲಿ ಮಾಜಿ ಎಂಎಲ್ಸಿ ಜಿ. ಮಾದಪ್ಪ, ಕೋಡ್ಲು ಶ್ರೀಧರ, ವೆಂಕಟೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News