‘ಅಧಿಕಾರಿಗಳ ಕಿರುಕುಳ ಖಂಡಿಸಿ ಪಾನ್‌ಬೀಡಾ ಮಾಲಕರ ಸಂಘದಿಂದ ಧರಣಿ’
ಸಾಗರ, ಆ.30: ಐಪಿಎಸ್ ಅಧಿಕಾರಿಗಳು ಎಂದ ತಕ್ಷಣ ಅವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲ ಎಂದು ಕೊಳ್ಳಬೇಡಿ. ಬಡವರ ಹೊಟ್ಟೆಯ ಮೇಲೆ ಹೊಡೆಯಲು ಮುಂದಾದರೆ ಹೋರಾಟದ ಮೂಲಕ ನ್ಯಾಯ ಪಡೆಯುತ್ತೇವೆ ಎಂದು ಸಂಘದ ಗೌರವಾಧ್ಯಕ್ಷ ಎಸ್.ವಿ. ಹಿತಕರ ಜೈನ್ ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ಪ್ರಾಂತ ಪಾನ್‌ಬೀಡಾ ಮಾಲಕರ ಸಂಘದ ವತಿಯಿಂದ ಬೀಡಾ ಅಂಗಡಿಗಳಿಗೆ ನುಗ್ಗಿ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅಧಿಕಾರದ ದರ್ಪದಲ್ಲಿ ಬಡ ಅಂಗಡಿ ಮಾಲಕರ ಮೇಲೆ ಪೊಲೀಸ್ ಸರ್ಪಗಾವಲಿನಲ್ಲಿ ದೌರ್ಜನ್ಯ ಮಾಡುವುದನ್ನು ಅಧಿಕಾರಿಗಳು ಬಿಡಬೇಕು. ಪರವಾನಿಗೆ ಪಡೆದು ಬೀಡಾ ಅಂಗಡಿ ನಡೆಸುತ್ತಿರುವವರ ಅಂಗಡಿಗಳಿಗೆ ನುಗ್ಗಿ, ಸಿಕ್ಕಿದ್ದನ್ನು ದೋಚಿಕೊಂಡು ಹೋದ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು.
ಪೊಲೀಸ್ ಇಲಾಖೆ ಶಾಂತಿ ಸಭೆಯನ್ನು ನಡೆಸಿ ಜನರಿಗೆ ಸೌಜನ್ಯದ ಪಾಠ ಹೇಳುತ್ತದೆ. ಈ ನಿಯಮವನ್ನು ತಾವು ಪಾಲಿಸುತ್ತಿದ್ದೇವಾ ಎನ್ನುವುದನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶ್ನಿಸಿಕೊಳ್ಳಬೇಕಾಗಿದೆ. ತಾಲೂಕಿನಲ್ಲಿ ಗಾಂಜಾ ಮಾರಾಟ ಹೆಚ್ಚುತ್ತಿದೆ. ಬಣ್ಣ ಮಿಶ್ರಣ ಮಾಡಿರುವ ನಕಲಿ ಟೀಪುಡಿ ಮಾರಾಟ ನಡೆಯುತ್ತಿದೆ. ಅನೇಕ ಕಳ್ಳತನ ಪ್ರಕರಣಗಳು ಇನ್ನೂ ಪತ್ತೆ ಮಾಡಿಲ್ಲ. ಇಂತಹ ಅಗತ್ಯ ಕೆಲಸಗಳನ್ನು ಬಿಟ್ಟು ಬಡ ಬೀಡಾ ಅಂಗಡಿ ಮಾಲಕರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಆನಂದ ಎಂ.ಡಿ. ಮಾತನಾಡಿ, ನಾವು ಇಲಾಖೆ ವಿಧಿಸಿರುವ ಕಾನೂನು ಪ್ರಕಾರವೇ ಉದ್ಯಮ ನಡೆಸಿಕೊಂಡು ಬರುತ್ತಿದ್ದಾಗ್ಯೂ, ಪೊಲೀಸರು ಅಂಗಡಿಗಳಿಗೆ ನುಗ್ಗಿ ಇನ್ನಿಲ್ಲದ ಕಾರಣ ಹೇಳಿ, ಅಂಗಡಿಯಲ್ಲಿದ್ದ ವಸ್ತುಗಳನ್ನು ಹೊತ್ತೊಯ್ದಿರುವ ಕ್ರಮ ಖಂಡನೀಯ ಎಂದರು. ಈ ವೇಳೆ ಸಂಘದ ಕುಮಾರ್ ಎಚ್., ಕಿರಣ್, ಮಹಾಬಲೇಶ್ವರ ಶೆಟ್ಟಿ, ಫ್ರಾನ್ಸಿಸ್, ವಿಷ್ಣುವರ್ಧನ್, ನಾಗರಾಜ ಬಿ.ಎಚ್., ರಾಘಣ್ಣ, ಗಣೇಶ್, ರವಿ, ಅಶೋಕ, ಅನ್ಸರ್, ನಾಗಭೂಷಣ್ ಮತ್ತಿತರರಿದ್ದರು.