×
Ad

ತಮಿಳುನಾಡಿನ ತಂತ್ರ ಫಲಿಸದು: ಸಚಿವ ಜಯಚಂದ್ರ

Update: 2016-08-30 23:43 IST

ಬೆಂಗಳೂರು, ಆ.30: ತಮಿಳುನಾಡಿ ನಲ್ಲಿ ಪ್ರಸ್ತುತ ಮಳೆ ಬೀಳುತ್ತಿದ್ದು, ಅಲ್ಲಿನ ಜಲಾಶಯಗಳಲ್ಲಿ ನೀರಿದ್ದರೂ, ಕಾವೇರಿ ನೀರು ಬಿಡುಗಡೆಗೆ ಆಗ್ರಹಿಸಿ ತಮಿಳುನಾಡು ಕೈಗೊಂಡಿರುವ ಹೋರಾಟದ ತಂತ್ರ ಫಲಿಸುವುದಿಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಾಶಯಗಳು ಖಾಲಿಯಾಗಿದ್ದು, ಪ್ರಸಕ್ತ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಜಲಾಶಯಗಳಿರುವುದು ತಮಿಳುನಾಡಿಗೆ ನೀರು ಬಿಡಲಿಕ್ಕೆ ಎಂಬ ಮನೋಭಾವವನ್ನು ಅಲ್ಲಿನ ಸರಕಾರ ಬೆಳೆಸಿಕೊಂಡಿರುವುದು ಸಲ್ಲ ಎಂದು ಆಕ್ಷೇಪಿಸಿದ ಅವರು, ತಮಿಳುನಾಡು ಬಂದ್ ಮಾಡಲಿ, ಮತ್ತೇನೆ ಮಾಡಿದರೂ, ನೀರು ಬಿಡಲು ಸಾಧ್ಯವಿಲ್ಲ. ವಾಸ್ತವ ಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗುವುದು ಎಂದರು.
 ಬಫರ್ ರೆನ್ ತೆರವು: ರಾಜಕಾಲುವೆ ಒತ್ತುವರಿ ತೆರವು ಮಾದರಿಯಲ್ಲೇ ಕೆರೆಗೆ ನೀರು ಹರಿದು ಬರುವ ಕಾಲುವೆ ವ್ಯಾಪ್ತಿಯ ಬಫರ್ ರೆನ್ ಒತ್ತುವರಿ ತೆರವಿಗೂ ಕ್ರಮಕೈಗೊಳ್ಳಲು ಉದ್ದೇಶಿಸ ಲಾಗಿದೆ. ಕೆರೆಗಳ ಸಂರಕ್ಷಣೆ ದೃಷ್ಟಿಯಿಂದ ಒತ್ತುವರಿ ತೆರವು ಅನಿವಾರ್ಯ ಎಂದು ಸ್ಪಷ್ಟಣೆ ನೀಡಿದರು.
ಬೆಂಗಳೂರು ನಗರದ ಕೆರೆಗಳ ಸಂರಕ್ಷಣೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ರಾಜ್ಯದ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿನ ಕೆರೆಗಳ ಸಂರಕ್ಷಣೆಗೆ ಪ್ರತ್ಯೇಕ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಕೆರೆ ಪ್ರದೇಶದಲ್ಲಿ ಸಸಿ ನೆಡುವ ಆಂದೋಲನ ಹಮ್ಮಿಕೊಳ್ಳ ಲಾಗುವುದು ಎಂದು ಜಯಚಂದ್ರ ತಿಳಿಸಿದರು.
 ತುಂಡು ಗುತ್ತಿಗೆ ರದ್ದು: ಸಣ್ಣ ನೀರಾವರಿ ಇಲಾಖೆ ತುಂಡು ಗುತ್ತಿಗೆ ಅವ್ಯವಹಾರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 5ಲಕ್ಷ ರೂ.ವರೆಗಿನ ತುಂಡು ಗುತ್ತಿಗೆಯನ್ನು ರದ್ದುಗೊಳಿಸಲು ಸೂಚಿಸಲಾಗಿದೆ ಎಂದ ಅವರು, ಕೊಪ್ಪಳದಲ್ಲಿ ನಡೆದಿದ್ದ ಅವ್ಯವಹಾರ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ, ನಷ್ಟ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಯಚಂದ್ರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆ ತುಂಬಿಸಲು 1,380ಕೋಟಿ ರೂ.ಟೆಂಡರ್ ಅಂತಿಮಗೊಳಿಸಲಾಗಿದೆ. ಚಲ್ಲಘಟ್ಟ ಕಣಿವೆಯಿಂದ ಕೋಲಾರಕ್ಕೆ ಮತ್ತು ಹೆಬ್ಬಾಳ ಕೆರೆಯಿಂದ ಚಿಕ್ಕಬಳ್ಳಾಪುರಕ್ಕೆ ಸಂಸ್ಕರಿಸಿದ ನೀರು ಪೂರೈಕೆ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News