ಎಲ್ಲ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ: ಸಿಎಂ ಸಿದ್ದರಾಮಯ್ಯ

Update: 2016-08-30 18:14 GMT

ಅ.2ರಂದು ಶಿಲಾನ್ಯಾಸ

ಬೆಂಗಳೂರು, ಆ.30: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಮಾಡಬೇಕೆಂಬುದು ನಮ್ಮ ಉದ್ದೇಶ. ನಿವೇಶನ ಲಭ್ಯವಿರುವ ಜಿಲ್ಲೆಗಳಲ್ಲಿ ಅಕ್ಟೋಬರ್ 2ರಂದು ಗಾಂಧಿ ಭವನಗಳಿಗೆ ಶಿಲಾನ್ಯಾಸ ನೆರವೇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನಗಳ ನಿರ್ಮಾಣ ಕುರಿತು ಚರ್ಚಿಸಲು ಸ್ವಾತಂತ್ರ ಹೋರಾಟಗಾರರು, ಗಾಂಧಿವಾದಿಗಳು ಹಾಗೂ ಸಾಹಿತಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಗಾಂಧಿ ಭವನ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ನಿಗದಿ ಮಾಡಲಾಗಿದೆ. ಹೀಗಾಗಿ ಭವನಗಳ ನಿರ್ಮಾಣ ಕಾರ್ಯಕ್ಕೆ ಯಾವುದೇ ತೊಂದರೆ ಇಲ್ಲ. ನಿರ್ಮಾಣವಾಗುವ ಗಾಂಧಿ ಭವನಗಳ ನಿರ್ವಹಣೆ ಮತ್ತು ಆ ಭವನಗಳು ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳಲು ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾ ಗುವುದು. ಹಿರಿಯ ಗಾಂಧಿವಾದಿಗಳು ಸಮಿತಿಯ ಕಾರ್ಯಾಧ್ಯಕ್ಷ ರಾಗಲಿದ್ದಾರೆ ಎಂದು ಅವರು ಹೇಳಿದರು. ಗಾಂಧಿಯವರ ತತ್ವಗಳಿಂದ ವಿದ್ಯಾರ್ಥಿಗಳು, ಯುವಕರು ಮತ್ತು ರಾಜಕಾರಣಿಗಳು ವಿಮುಖರಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮಹಾತ್ಮ ಗಾಂಧಿಯವರ ತತ್ವ ಮತ್ತು ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಈ ಕುರಿತು ಅರಿವು ಮೂಡಿಸಬೇಕು. ಈ ಕಾರಣಕ್ಕಾಗಿ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನಗಳನ್ನು ನಿರ್ಮಿಸುವ ಪರಿಕಲ್ಪನೆ ಯನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು. ಶಾಲಾ ಮಕ್ಕಳಿಗೆ ಖಾದಿ ಸಮವಸ್ತ್ರ ವಿತರಿಸಬೇಕು ಎಂಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಈ ವರ್ಷ ಮಕ್ಕಳಿಗೆ ಸಮವಸ್ತ್ರ ವಿತರಣೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಖಾದಿ ಸಮವಸ್ತ್ರ ವಿತರಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಿಸುವ ಗಾಂಧಿ ಭವನಗಳು ಚಟುವಟಿಕೆ ರಹಿತ ಆಗಬಾರದು ಎಂದು ಹೇಳಿದ ಮುಖ್ಯಮಂತ್ರಿ, ಈ ಸಂಬಂಧ ತಮ್ಮ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಡಾ.ಎಚ್.ಎಸ್.ದೊರೆಸ್ವಾಮಿ, ಹೊ.ಶ್ರೀನಿವಾಸಯ್ಯ, ಡಾ.ಪಾಟೀಲ್‌ಪುಟ್ಟಪ್ಪ, ಸುಶೀಲಮ್ಮ, ಪ್ರಸನ್ನ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಪ್ರೊ.ಸಿದ್ದರಾಮಯ್ಯ, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News