‘ಸ್ವಚ್ಛ ಭಾರತ’ ಅನುದಾನ ಹೆಚ್ಚಳಕ್ಕೆ ಸಿಎಂ ಮನವಿ

Update: 2016-08-30 18:19 GMT

ಬೆಂಗಳೂರು, ಆ.30: ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ರಾಜ್ಯಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಳ ಮಾಡುವಂತೆ ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಮತ್ತು ನೈರ್ಮಲ್ಯ ಕುರಿತು ನಡೆದ ಸಭೆಯಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿಗೆ ಅವರು ಮನವಿ ಮಾಡಿದರು.
ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನು ಮಾಡಬೇಕೆಂಬುದು ನಮ್ಮ ಸರಕಾರದ ಸಂಕಲ್ಪ. ರಾಜ್ಯದಲ್ಲಿ ಇನ್ನು 32 ಲಕ್ಷ ಶೌಚಾಲಯಗಳನ್ನು ಕಟ್ಟಿಸಬೇಕು. ಈ ವರ್ಷ 12 ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಗುರಿಯಿದೆ. ಅದಕ್ಕೆ ಬೇಕಿರುವ ಅನುದಾನ ಬಿಡುಗಡೆಗೆ ನಾವು ಮಾಡಿರುವ ಮನವಿಗೆ ರಮೇಶ್ ಜಿಗಜಿಣಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.
ಸ್ವಚ್ಛ ಭಾರತ ಅಭಿಯಾನಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಕೇಂದ್ರದ 1740 ಕೋಟಿ ರೂ.ಯೋಜನೆಗೆ ಅನುಮೋದನೆ ಸಿಕ್ಕಿದೆ. ಕೇಂದ್ರ ಸರಕಾರ ಶೇ.60ರಷ್ಟು ಅನುದಾನ ನೀಡಿದರೆ ರಾಜ್ಯ ಸರಕಾರವು ಶೇ.40ರಷ್ಟು ಭರಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡಿನಲ್ಲಿ ಪ್ರತಿಭಟನೆ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ರಾಜ್ಯಕ್ಕೆ ಸಂಕಷ್ಟದ ವರ್ಷ ಇದಾಗಿದ್ದು, ವಸ್ತುಸ್ಥಿತಿಯನ್ನು ನಾವು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದ ಜಲಾಶಯಗಳಲ್ಲಿ 114 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿದೆ. ಈಗ ನಮ್ಮ ಬಳಿ ಲಭ್ಯವಿರುವುದು ಕೇವಲ 50 ಟಿಎಂಸಿ ನೀರು ಮಾತ್ರ. ಕುಡಿಯುವ ಉದ್ದೇಶಕ್ಕಾಗಿಯೆ 40 ಟಿಎಂಸಿ ನೀರಿನ ಅಗತ್ಯವಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ 34 ಟಿಎಂಸಿ ನೀರು ಇದೆ. ಈಗ ಅವರಿಗೆ ನೀರಿನ ಆವಶ್ಯಕತೆಯಿಲ್ಲ. ವಸ್ತುಸ್ಥಿತಿಯನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಮಾತನಾಡಿ, ನಾನು ಈ ರಾಜ್ಯದ ಜನಪ್ರತಿನಿಧಿಯಾಗಿ ಕೈಲಾದ ಮಟ್ಟಿಗೆ ಕೆಲಸ ಮಾಡುವ ಪ್ರಯತ್ನ ಮಾಡುತ್ತೇನೆ. ಕೇಂದ್ರ ಸರಕಾರದ ಜೊತೆ ಮಾತುಕತೆ ನಡೆಸುತ್ತೇನೆ. ರಾಜ್ಯಕ್ಕೆ ಸವಲತ್ತುಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನ ಪಡುತ್ತೇನೆ ಎಂದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

ರಾಜ್ಯ ಸಚಿವ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿಯಿದ್ದು, ಈ ಪೈಕಿ ಒಂದು ಸ್ಥಾನ ಕೆ.ಜೆ.ಜಾರ್ಜ್ ಅವರದ್ದು. ಇನ್ನೊಂದು ಸ್ಥಾನವನ್ನು ಸಂದರ್ಭ ನೋಡಿಕೊಂಡು ಭರ್ತಿ ಮಾಡಲಾಗುವುದು. ನಿಗಮ, ಮಂಡಳಿಗಳಿಗೂ ಅಧ್ಯಕ್ಷರನ್ನು ಶೀಘ್ರವೇ ನೇಮಕ ಮಾಡಲಾಗುವುದು.
 ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News