ಸಚಿವೆ ಉಮಾಶ್ರೀ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣ: ಸಮನ್ಸ್‌ಗೆ ಹೈಕೋರ್ಟ್ ತಡೆ

Update: 2016-08-30 18:22 GMT

ಬೆಂಗಳೂರು, ಆ.30: ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ರೇಪಿಸ್ಟ್ ಎಂದಿದ್ದ ಸಚಿವೆ ಉಮಾಶ್ರೀ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ಸೊರಬ ಜೆಎಂಎಫ್‌ಸಿ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್‌ಗೆ ಹೈಕೋರ್ಟ್ ತಡೆ ನೀಡಿದೆ.

   
   ಈ ಸಂಬಂಧ ಸಚಿವೆ ಉಮಾಶ್ರೀ ಸಮನ್ಸ್ ರದ್ದುಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ್ ಭೈರಾರೆಡ್ಡಿ ಅವರಿದ್ದ ನ್ಯಾಯಪೀಠ. ಈ ಆದೇಶ ನೀಡಿದೆ. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಸಿ.ಎಚ್.ಹನುಮಂತರಾಯಪ್ಪ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ತುಮಕೂರಿನಲ್ಲಿ ನಡೆದ ಸಮಾವೇಶದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಮಾಜಿ ಸಚಿವ ಹಾಲಪ್ಪ ಅವರು ವ್ಯಾಪ್ತಿ ಮೀರಿದ ಸೊರಬದ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ, ಪ್ರಕರಣವನ್ನು ರದ್ದುಪಡಿಸಬೇಕೆಂದು ನ್ಯಾಯಪೀಠಕ್ಕೆ ತಿಳಿಸಿದರು.
 ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಸಚಿವೆ ಉಮಾಶ್ರೀ ವಿರುದ್ಧ ತುಮಕೂರಿನ ವ್ಯಾಪ್ತಿಯೊಳಗೆ ಪ್ರಕರಣವನ್ನು ದಾಖಲಿಸಬಹುದೇ ಎಂದು ಪ್ರಶ್ನಿಸಿದ ನ್ಯಾಯಪೀಠವು ಸಮನ್ಸ್ ಜಾರಿಗೆ ತಡೆ ನೀಡಿತು. ರೇಪಿಸ್ಟ್ ಎಂದಿದ್ದ ಉಮಾಶ್ರೀ ವಿರುದ್ಧ ಹರತಾಳು ಹಾಲಪ್ಪಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News