ಎಸಿಬಿಯಿಂದ ದಾಖಲೆಗಳು ವಶ?

Update: 2016-08-30 18:23 GMT

ಬೆಂಗಳೂರು, ಆ.30: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ವಿರುದ್ಧದ ಭೂ ಕಬಳಿಕೆ ಪ್ರಕರಣದ ಕುರಿತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಕಂದಾಯ ಇಲಾಖೆಯಿಂದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸೌಧದ ದಾಖಲೆಗಳ ಕೊಠಡಿಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದ ಎಸಿಬಿ ಅಧಿಕಾರಿಗಳು ಕೆಲವು ದಾಖಲೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆರ್‌ಟಿಐ ಕಾರ್ಯಕರ್ತ ಎಸ್.ಭಾಸ್ಕರನ್ ನೀಡಿರುವ ದೂರನ್ನು ಆಧರಿಸಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಅರವಿಂದಜಾಧವ್ ವಿರುದ್ಧ ದೂರು ನೀಡಿರುವ ಭಾಸ್ಕರನ್ ಅವರನ್ನು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಮೌಖಿಕವಾಗಿ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿಯ ಸರ್ವೇ ನಂ.29 ರಲ್ಲಿ 74 ಎಕರೆ ಸರಕಾರಿ ಜಮೀನಿದೆ. ಈ ಪೈಕಿ 8.3 ಎಕರೆ ತಮ್ಮ ತಾಯಿಗೆ ಮಂಜೂರಾಗಿರುವಂತೆ ದಾಖಲೆ ಸೃಷ್ಟಿಸಲು ಜಾಧವ್ ಒತ್ತಡ ಹಾಕಿದ್ದಾರೆ. 8.30 ಎಕರೆ ಸೇರಿ ಒಟ್ಟು 66 ಎಕರೆ ಜಮೀನನ್ನು ವಿವಿಧ ಫಲಾನುಭವಿಗಳಿಗೆ ನೀಡಲು ಅಕ್ರಮವಾಗಿ ದಾಖಲೆ ಸೃಷ್ಟಿಸಲು ಸಿದ್ಧತೆ ನಡೆಸಲಾಗಿತ್ತು ಎನ್ನಲಾಗಿದೆ.
ಆದರೆ, ಸರ್ವೇ ಇಲಾಖೆ ಅಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಅರವಿಂದಜಾಧವ್ ತಮಗೆ ಸಹಕರಿಸದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ಭಾಸ್ಕರನ್ ಎಸಿಬಿಗೆ ದೂರು ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News