ಕಾನೂನಿನ ಚೌಕಟ್ಟಿನಲ್ಲಿ ಜೀವನ ನಡೆಸಿ: ನ್ಯಾ.ಪ್ರಭಾವತಿ
ಚಿಕ್ಕಮಗಳೂರು, ಆ.31: ಹುಟ್ಟಿನಿಂದ ಮರಣದವರೆಗೆ ಕಾನೂನಿನ ಚೌಕಟ್ಟಿನಲ್ಲಿ ಜೀವನ ನಡೆಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ.ಹಿರೇಮಠ್ ಹೇಳಿದರು.
ಚಿಕ್ಕಮಗಳೂರು ನಗರದ ಎಸ್‌ಟಿಜೆ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಇಲಾಖೆ, ವಕೀಲರ ಸಂಘ ಹಾಗೂ ಎಸ್‌ಟಿಜೆ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿನಿತ್ಯದ ಜೀವನ-ವ್ಯವಹಾರದಲ್ಲಿ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಇದರ ಜ್ಞ್ಞಾನ ಬೆಳೆಸಿಕೊಂಡಲ್ಲಿ ನಮ್ಮ ಹಕ್ಕು ಚಲಾಯಿಸಬಹುದು. ಜೊತೆಗೆ ತೊಂದರೆ ತಡೆಗಟ್ಟಬಹುದು. ಕಾನೂನಿನ ಅರಿವಿಲ್ಲದವರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಹೆಣ್ಣು ಮಗುವಿನ ಹತ್ಯೆ ತಡೆಯಲು ಭ್ರೂಣ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಮಗು ಹುಟ್ಟಿದ ಒಂದು ವರ್ಷದ ಒಳಗೆ ಜನನ ಪ್ರಮಾಣ ಪತ್ರ ಪಡೆಯಬೇಕು. ಮಕ್ಕಳನ್ನು ಕಾರ್ಮಿಕರಂತೆ ದುಡಿಸಿಕೊಳ್ಳುವುದನ್ನು ತಡೆಗಟ್ಟಲು ಬಾಲ ಕಾರ್ಮಿಕ ವಿರೋಧಿ ಕಾನೂನು ಇದೆ. ಇಂತಹ ಕಾನೂನುಗಳ ಕುರಿತು ಜ್ಞಾನ ಹೆಚ್ಚಿಸಿಕೊಂಡು ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಕಿವಿಮಾತು ಹೇಳಿದರು.
ತೊಂದರೆ ಆದಲ್ಲಿ ಯಾರನ್ನು ಸಂಪರ್ಕಿಸಬೇಕೆಂಬ ಸಾಮಾನ್ಯ ಜ್ಞಾನ ಇದ್ದಲ್ಲಿ ನೊಂದ ಮನಸ್ಸುಗಳಿಗೆ ನ್ಯಾಯ ದೊರಕಿಸಿಕೊಡಬಹುದು. ನೊಂದವರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಅಗತ್ಯ ನೆರವು ನೀಡಲಾಗುತ್ತಿದೆ. ದಿನನಿತ್ಯದ ಜೀವನ ಜಂಜಾಟದಲ್ಲಿ ಕಾನೂನು ಅರಿವು ಬೆಳೆಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಕೀಲ ಎಸ್.ಎಸ್.ವೆಂಕಟೇಶ್ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಕಾಯ್ದೆಗಳು ಮತ್ತು ಬಾಲ್ಯ ವಿವಾಹ ನಿಷೇಧ ನಿಯಮಗಳು-2014 ಕುರಿತು ಮಾತನಾಡಿ, ಬಾಲ್ಯ ವಿವಾಹದಂತಹ ಪ್ರಕರಣಗಳು ನಡೆಯುತ್ತಿದ್ದಲ್ಲಿ ಅವುಗಳನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ತಿಳಿಸಿದರು.
ಎಸ್‌ಟಿಜೆ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಕೆ.ಹಳದಪ್ಪಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಎಚ್.ದಯಾನಂದ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಚ್.ಸಿ.ನಟರಾಜ್, ವಕೀಲರ ಸಂಘದ ಕಾರ್ಯದರ್ಶಿ ಎನ್.ಆರ್. ತೇಜಸ್ವಿ ಮತ್ತಿತರರು ಇದ್ದರು. ವಿದ್ಯಾರ್ಥಿ ಕವನಾ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕಿ ಲತಾ ಸ್ವಾಗತಿಸಿದರು.