ಡಿಸಿ ಕಚೇರಿ ಆವರಣ: ಅನುಮಾನಾಸ್ಪದ ಪ್ಲಾಸ್ಟಿಕ್ ಕವರ್ ತಂದಿಟ್ಟ ಕಿರಿಕಿರಿ
ಶಿವಮೊಗ್ಗ, ಆ. 31: ಜಿಲ್ಲಾಡಳಿತದ ಶಕ್ತಿಕೇಂದ್ರವಾದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಕಂಡುಬಂದ ಕಪ್ಪುಬಣ್ಣದ ಪ್ಲಾಸ್ಟಿಕ್ ಕವರ್‌ವೊಂದು ಇಡೀ ಪೊಲೀಸ್ ಇಲಾಖೆಯನ್ನು ಸರಿಸುಮಾರು ಅರ್ಧ ಗಂಟೆಯ ಕಾಲ ಹೈ ಅಲರ್ಟ್ ಮಾಡುವುದರ ಜೊತೆಗೆ ಬೆಸ್ತು ಬೀಳುವಂತೆ ಮಾಡಿದ ಘಟನೆ ಬುಧವಾರ ಮಧ್ಯಾಹ್ನ ನಡೆಯಿತು. ಮಧ್ಯಾಹ್ನ ಸರಿಸುಮಾರು 1:45 ರಿಂದ 2:15 ರ ವೇಳೆಯಲ್ಲಿ ಈ ಹೈಡ್ರಾಮಾ ನಡೆದಿದೆ. ಡಿಸಿ ಕಚೇರಿ ಆವರಣದ ಪ್ರವೇಶ ದ್ವಾರದ ಸಮೀಪ ಕಪ್ಪುಬಣ್ಣದ ಪ್ಲಾಸ್ಟಿಕ್ ಕವರ್‌ವೊಂದು ಬಿದ್ದಿತ್ತು. ಅದರೊಳಗೆ ಏನನ್ನೋ ತುಂಬಿಟ್ಟಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಕಚೇರಿಯ ಕೆಲ ಸಿಬ್ಬಂದಿ ಅನುಮಾನದ ಮೇರೆಗೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ವೇಳೆಗಾಗಲೇ ಪ್ಲಾಸ್ಟಿಕ್ ಕವರ್‌ನೊಳಗೆ ಬಾಂಬ್ ಮಾದರಿಯ ವಸ್ತುವಿರುವ ಸಾಧ್ಯತೆಯಿದೆ ಎಂಬ ಅಂತೆಕಂತೆಗಳು ಹರಿದಾಡಲಾರಂಭಿಸಿದ್ದವು. ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಹಾಗೂ ಇತರ ಠಾಣೆಯ ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ದೌಡಾಯಿಸಿದ್ದಾರೆ. ಹಾಗೆಯೇ ಬಾಂಬ್ ಪತ್ತೆ ಹಾಗೂ ಶ್ವಾನ ದಳದ ಸಿಬ್ಬಂದಿ ಆಗಮಿಸಿ ಶಂಕಿತ ಪ್ಲಾಸ್ಟಿಕ್ ಕವರ್‌ನ ಕೂಲಂಕಷ ತಪಾಸಣೆ ನಡೆಸಿದ್ದಾರೆ. ಅದರೊಳಗೆ ಯಾವುದೇ ಸ್ಫೋಟಕ ವಸ್ತುವಿಲ್ಲವೆಂಬುದನ್ನು ದೃಢಪಡಿಸಿಕೊಂಡ ನಂತರ, ಆ ಕವರನ್ನು ವಶಕ್ಕೆ ಪಡೆದ ಪೊಲೀಸರು ಪರಿಶೀಲನೆಗೊಳಪಡಿಸಿದ್ದಾರೆ. ಆದರೆ ಪ್ಲಾಸ್ಟಿಕ್ ಕವರ್ ಒಳಗೆ ಊಟ ಮಾಡಿದ್ದ ಕವರ್‌ಗಳ ಪೊಟ್ಟಣವಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿ-ಸಿಬ್ಬಂದಿ ನಿಟ್ಟುಸಿರು ಬಿಟ್ಟು ನಗುತ್ತಲೇ ಡಿಸಿ ಕಚೇರಿಯಿಂದ ಹಿಂದಿರುಗಿದ್ದಾರೆ.
ತಬ್ಬಿಬ್ಬು: ಏಕಾಏಕಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಬಾಂಬ್ ಪತ್ತೆ ದಳದ ಸಿಬ್ಬಂದಿ ಕಚೇರಿಗೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರಿಂದ ಡಿಸಿ ಕಚೇರಿ ಸಿಬ್ಬಂದಿ ತಬ್ಬಿಬ್ಬುಗೊಳ್ಳುವಂತಾಯಿತು. ಕೆಲ ಕುತೂಹಲ ಭರಿತ ಸಾರ್ವಜನಿಕರು ಕಚೇರಿ ಆವರಣದಲ್ಲಿ ಜಮಾಯಿಸಿದ್ದು ಕಂಡುಬಂದಿತು.
ಪರಿಶೀಲನೆಗೆ ಸೂಚನೆ: ಯಾರೋ ಊಟ ಮಾಡಿದ ನಂತರ ಪ್ಲಾಸ್ಟಿಕ್ ಕವರ್‌ನ್ನು ಅಲ್ಲಿಯೇ ಬಿಟ್ಟು ಹೋಗಿರುವ ಸಾಧ್ಯತೆಯಿದೆ. ಆದರೆ ಈ ಕವರ್ ಬಿಟ್ಟು ಹೋಗಿದ್ದ್ಯಾರು? ಯಾವಾಗ? ಎನ್ನುವುದರ ಮಾಹಿತಿಯನ್ನು ಪೊಲೀಸ್ ಇಲಾಖೆ ಕಲೆ ಹಾಕುತ್ತಿದ್ದು, ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ. ಡಿಸಿ ಕಚೇರಿಯ ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಪ್ರತಿಯೊಂದು ವಿಭಾಗದಲ್ಲಿಯೂ ಕ್ಯಾಮರಾ ಕಣ್ಗಾವಲಿದೆ. ಈ ಕವರ್ ಬಿಟ್ಟು ಹೋಗಿದ್ದು ಯಾವಾಗ? ಯಾರು? ಎನ್ನುವುದರ ಮಾಹಿತಿ ತಿಳಿದುಕೊಳ್ಳುವ ಉದ್ದೇಶದಿಂದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿ ಪರಿಶೀಲನೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಒಟ್ಟಾರೆ ಗಣಪತಿ ಹಬ್ಬ ಹಾಗೂ ಬಕ್ರೀದ್‌ಗಳ ಪೂರ್ವಭಾವಿ ಸಿದ್ಧತೆಯಲ್ಲಿ ಮಗ್ನರಾಗಿದ್ದ ಪೊಲೀಸ್ ಇಲಾಖೆಗೆ ಡಿಸಿ ಕಚೇರಿ ಆವರಣದಲ್ಲಿ ಕಂಡುಬಂದ ಕಪ್ಪು ಬಣ್ಣದ ಊಟದ ಪ್ಲಾಸ್ಟಿಕ್ ಕವರ್‌ವೊಂದು ಅರ್ಧ ಗಂಟೆಗಳ ಕಾಲ ಇಡೀ ಪೊಲೀಸ್ ಇಲಾಖೆಯನ್ನೇ ಹೈ ಅಲರ್ಟ್ ಆಗುವಂತೆ ಮಾಡಿದ್ದಂತೂ ಸತ್ಯವಾಗಿದೆ.
ಡಿಸಿ ಕಚೇರಿಯ ಆವರಣದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಕಂಡುಬಂದಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಪರಿಶೀಲನೆಯ ವೇಳೆ ಆ ಪ್ಲಾಸ್ಟಿಕ್ ಕವರ್‌ನಲ್ಲಿ ಯಾವುದೇ ರೀತಿಯ ಅಪಾಯಕಾರಿ ವಸ್ತುಗಳು ಕಂಡುಬರಲಿಲ್ಲ. ಊಟ ಮಾಡಿದ್ದ ಕವರ್‌ಗಳ ಪೊಟ್ಟಣವನ್ನು ಆ ಪ್ಲಾಸ್ಟಿಕ್ ಕವರ್‌ನೊಳಗೆ ಹಾಕಿ ಇಟ್ಟಿದ್ದು ಕಂಡುಬಂದಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.