ಮದ್ಯ ಮಾರಾಟ ತಡೆಯದಿದ್ದರೆ ಆತ್ಮಹತ್ಯೆ : ಗ್ರಾಮಸ್ಥರಿಂದ ಎಚ್ಚರಿಕೆ

Update: 2016-08-31 16:54 GMT

ಕಾರವಾರ, ಆ.31: ಅಂಕೋಲಾ ತಾಲೂಕಿನ ಬೆಳಂಬಾರದಲ್ಲಿ ಅಕ್ರಮ ಮದ್ಯ ಮಾರಾಟಗಾರರ ಸಂಖ್ಯೆ ವಿಪರೀತವಾಗಿದ್ದು, ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳದ ಪಕ್ಷದಲ್ಲಿ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಭಟಿಸಿದ ಗ್ರಾಮಸ್ಥ ಮಹಿಳೆಯರು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದ್ದಾರೆ.

ಅಕ್ರಮ ಮದ್ಯದ ವಿರುದ್ಧ ಊರಿನ ಪ್ರಜ್ಞಾವಂತ ಮಹಿಳೆಯರು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದರೂ ಮದ್ಯ ಮಾರಾಟ ದಂಧೆಗೆ ಯಾವುದೇ ಕಡಿವಾಣ ಬಿದ್ದಿಲ್ಲ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ್ದ ದೂರು ನೀಡಿದರೆ ದೂರು ನೀಡಿದವರ ವಿರುದ್ಧವೇ ಕ್ರಮ ಕೈಗೊಳ್ಳಲಾಗುತ್ತಿದೆ.

ಅಬಕಾರಿ ಇಲಾಖೆಯ ಶಾಮೀಲಾತಿಯಲ್ಲಿ ಈ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ಬಡ ಜನರು ಬೇಸತ್ತಿದ್ದು, ಅನೇಕರು ಕುಡಿತದ ಚಟಕ್ಕೆ ಬಲಿಯಾಗಿದ್ದಾರೆ. ಊರಲ್ಲಿನ ಮಹಿಳೆಯರು ಹಾಗೂ ಮಕ್ಕಳು ಕೂಡ ಚಟ ಅಂಟಿಸಿಕೊಳ್ಳುತ್ತಿದ್ದಾರೆ ವ್ಯಸನಕ್ಕೆ ಹಣ ಹೊಂದದಿದ್ದಾಗ ಕಳ್ಳತನ, ದರೋಡೆಯ ಹಾದಿ ಹಿಡಿಯುವ ಸಾಧ್ಯತೆ ಇದೆ ಎಂದು ಗ್ರಾಮಸ್ಥ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.

ಈ ಹಿಂದೆ ಅಬಕಾರಿ, ಪೊಲೀಸ್ ಸೇರಿದಂತೆ ಹಲವು ಇಲಾಖೆಗಳ ಮುಖ್ಯಸ್ಥರಿಗೆ ಅಕ್ರಮ ದಂಧೆಗಳ ಬಗ್ಗೆ ದೂರು ನೀಡಲಾಗಿತ್ತು. ದೂರು ನೀಡಿದ ನಂತರ ಬೆಳಂಬಾರಕ್ಕೆ ಬಂದ ಅಧಿಕಾರಿಗಳು ಸಭೆ ನಡೆಸಿ, ಅಕ್ರಮ ನಡೆಸುವವರ ಪರವಾಗಿ ಮಾತನಾಡಿದ್ದರು. ಮದ್ಯದ ಚಟದಿಂದ ಎಲ್ಲರ ಮನೆಯಲ್ಲಿಯೂ ಬಡತನ ಹೆಚ್ಚಿದ್ದು, ಎಲ್ಲ್ಲ ಮನೆಯ

ಲ್ಲಿಯೂ ಕುಡಿತಕ್ಕೆ ಬಲಿಯಾಗಿದ್ದಾರೆ. ಶಾಲೆಯ ಸುತ್ತಮುತ್ತಲೂ ಎಗ್ಗಿಲ್ಲದೇ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ಶೈಕ್ಷಣಿಕ ಅಭಿವೃದ್ಧಿಗೂ ತೊಂದರೆ ಉಂಟಾಗುತ್ತಿದೆ. ಹಿಂದೊಮ್ಮೆ ಅಕ್ರಮ ದಂಧೆೆ ನಡೆಸುವವರ ಪಟ್ಟಿ ತಯಾರಿಸಿ ಅಧಿಕಾರಿಗಳಿಗೆ ನೀಡಲಾಗಿತ್ತು. ಹೀಗಿರುವಾಗಲೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಅಕ್ರಮ ನಡೆಸುವವರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಬೇಕು. ತಯಾರಿಸಿಟ್ಟ ಕಳ್ಳಬಟ್ಟಿ ಸಾರಾಯಿಯನ್ನು ನಾಶಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಮತ್ತೆ ಇಂತಹ ಕೃತ್ಯ ನಡೆಸದ ಬಗ್ಗೆ ಲಿಖಿತ ಹೇಳಿಕೆ ಪಡೆಯಬೇಕು. ಈ ಭಾಗದಲ್ಲಿ ಸರಕಾರದಿಂದ ಅಧಿಕೃತ ಸಾರಾಯಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಬಾರದು. ಸಂಪೂರ್ಣ ಊರನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿಸಲು ಜಿಲ್ಲಾಡಳಿತ ಪ್ರಯತ್ನಿಸಬೇಕು. ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮುಂದೆ ನಡೆಯುವ ಎಲ್ಲ ಬಗೆಯ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದ್ದು, ಇನ್ನು ಮುಂದೆ ಜನರ ಪ್ರತಿಭಟನೆಯ ತೀವ್ರತೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಎಚ್ಚರಿಸಿದರು. ಗುಲಾಬಿ ಗೌಡ, ಸಾವಿತ್ರಿ ಗೌಡ, ಸಣ್ಣು ಗೌಡ, ಸುಬದ್ರಿ ಗೌಡ, ಭಾಗೀರಥಿ ಗೌಡ, ಶೋಭಾ ಗೌಡ, ಹೊನ್ನಮ್ಮ ಗೌಡ, ಗಂಗೆ ಗೌಡ, ಜಯಂತಿ ಗೌಡ, ನಾಗರತ್ನ್ನಾ ಗೌಡ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News