ಒತ್ತುವರಿಗೆ ಸಹಕರಿಸಿದ ಅಧಿಕಾರಿಗಳಿಗೆ ಶಿಕ್ಷೆ ಖಚಿತ: ಸಿಎಂ ಸಿದ್ದರಾಮಯ್ಯ

Update: 2016-08-31 18:14 GMT

ಬೆಂಗಳೂರು, ಆ.31: ರಾಜ್ಯದಲ್ಲಿ ಸರಕಾರಿ ಭೂಮಿಯನ್ನು ಕಬಳಿಕೆ ಮಾಡಿರುವವರು, ಮಾಡಿಸಿದವರು ಹಾಗೂ ಅದರಲ್ಲಿ ಶಾಮೀಲಾಗಿರುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಒತ್ತುವರಿಯನ್ನು ತೆರವುಗೊಳಿಸು ವುದಕ್ಕಾಗಿ ‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ನಗರದ ಕಂದಾಯ ಭವನದಲ್ಲಿ ಆಯೋ ಜಿಸಿದ್ದ ‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ಗಳ ಪ್ರಾರಂಭೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ, ಸಹಕರಿಸಿದವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 25ಸಾವಿರ ರೂ. ದಂಡ ವಿಧಿಸಲು ವಿಶೇಷ ನ್ಯಾಯಾಲಯಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಅಧಿಕಾರಿಗಳ ಸಹಕಾರವಿಲ್ಲದೆ ಸರಕಾರಿ ಭೂ ಒತ್ತುವರಿಯಾಗಲು ಸಾಧ್ಯವಿಲ್ಲ. ಹೀಗಾಗಿ ಒತ್ತುವರಿಗೆ ಸಹಕರಿಸಿದ ಅಧಿಕಾರಿಗಳಿಗೆ ಶಿಕ್ಷೆಯಾಗಲೇಬೇಕು. ಆಗ ಮಾತ್ರ ಇತರ ಅಧಿಕಾರಿಗಳಿಗೆ ಎಚ್ಚರಿಕೆಯಾಗಲು ಸಾಧ್ಯ. ಇನ್ನು ಭೂಗಳ್ಳರು ಹಣದಿಂದ ಸರಕಾರ, ಪೊಲೀಸ್, ನ್ಯಾಯಾಧೀಶರನ್ನು ಕೊಂಡುಕೊಳ್ಳಬಲ್ಲೆವು ಎಂಬ ಧಿಮಾಕಿನಿಂದ ಮೆರೆಯುತ್ತಿದ್ದಾರೆ. ಇಂತಹವರಿಗೆ ಶಿಕ್ಷೆ ಯಾದರೆ ಮಾತ್ರ ವ್ಯವಸ್ಥೆ ಸರಿಯಾಗಲು ಸಾಧ್ಯವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಭೂ ಒತ್ತುವರಿದಾರರನ್ನು ಶಿಕ್ಷಿಸಲು ಭೂ ಕಂದಾಯ ಕಾಯ್ದೆ ಕಲಂ 39, 94 ಹಾಗೂ 104ರ ಅಡಿಯಲ್ಲಿ ಶಿಕ್ಷಿಸಲು ಅವಕಾಶವಿದ್ದವು. ಆದರೆ, ಒತ್ತುವರಿದಾರೊಂದಿಗೆ ಅಧಿಕಾರಿಗಳು ಶಾಮೀಲಾಗಿರುವುದರಿಂದ ಕಾಯ್ದೆ ಉಪಯೋಗಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ ಎಂದರು.


ಬೆಂಗಳೂರು ಜಿಲ್ಲೆಯೊಂದರಲ್ಲಿಯೇ ಸುಮಾರು 34 ಸಾವಿರ ಎಕರೆ ಸರಕಾರಿ ಭೂಮಿ ಒತ್ತುವರಿಯಾಗಿದೆ. ಅದರಲ್ಲಿ 16ಸಾವಿರ ಎಕರೆ ಉದ್ಯಾನವನ, ರಸ್ತೆ, ಆಟದ ಮೈದಾನಕ್ಕೆ ಒತ್ತುವರಿಯಾಗಿದ್ದು, ಇದನ್ನು ತೆರವು ಗೊಳಿಸಲು ಸಾಧ್ಯವಿಲ್ಲ. ಉಳಿದ 17ಸಾವಿರ ಎಕರೆಗೂ ಹೆಚ್ಚು ಜಾಗವನ್ನು ತೆರವುಗೊಳಿಸಲಾಗಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ 6ಸಾವಿರ ಎಕರೆಯನ್ನು ತೆರವುಗೊಳಿಸಲಾಗಿದೆ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಭೂಗಳ್ಳರು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸೊಕ್ಕಿನಿಂದ ಮೆರೆಯುತ್ತಿದ್ದಾರೆ. ಇವರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ತಕ್ಕ ಪಾಠ ಕಲಿಸಬೇಕು. ಆ ನಿಟ್ಟಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪಮಾತನಾಡಿ, ಕಾನೂನುಗಳು ಜಾರಿಯಾಗುವುದು ಮುಖ್ಯವಲ್ಲ. ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದರು. ಈ ವೇಳೆ ವಿಶೇಷ ನ್ಯಾಯಾಲಯದ ಅಧ್ಯಕ್ಷ ಎಚ್.ಎನ್.ನಾರಾಯಣ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿ, ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ, ನಗರ ಜಿಲ್ಲಾಧಿಕಾರಿ ವಿ.ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ದ ಅಧ್ಯಕ್ಷರಾಗಿ ಹೈಕೋರ್ಟ್‌ನ ನಿವೃತ್ತ ನ್ಯಾ.ಎಚ್.ಎನ್.ನಾರಾಯಣ್‌ಅವರನ್ನು ನೇಮಿಸಲಾಗಿದೆ. ಇವರೊಂದಿಗೆ ನ್ಯಾ.ಆರ್.ಎಚ್.ರೆಡ್ಡಿ ಹಾಗೂ ಬಿ.ಬಾಲಕೃಷ್ಣ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.


‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ದ ಅಧ್ಯಕ್ಷರಾಗಿ ಹೈಕೋರ್ಟ್‌ನ ನಿವೃತ್ತ ನ್ಯಾ.ಎಚ್.ಎನ್.ನಾರಾಯಣ್‌ಅವರನ್ನು ನೇಮಿಸಲಾಗಿದೆ. ಇವರೊಂದಿಗೆ ನ್ಯಾ.ಆರ್.ಎಚ್.ರೆಡ್ಡಿ ಹಾಗೂ ಬಿ.ಬಾಲಕೃಷ್ಣ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

ವಿಶೇಷ ನ್ಯಾಯಾಲಯದ ಲೋಪಗಳು
ಸರಕಾರಿ ಭೂಮಿಯನ್ನು ಕಬಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸ್ಥಾಪಿಸಿರುವ ‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ದ ಅಧಿಕಾರ ವ್ಯಾಪ್ತಿಯಲ್ಲಿ ಅನೇಕ ಲೋಪಗಳಿವೆ.

  •     ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗುವ ಅಪರಾಧಿಗಳಿಗೆ ಕೇವಲ 25ಸಾವಿರ ರೂ. ದಂದ ವಿಧಿಸುವಂತೆ ಆದೇಶಿಸಲಾಗಿದೆ. ಆದರೆ, ಕೋಟ್ಯಂತರ ವೌಲ್ಯದ ಆಸ್ತಿಯನ್ನು ಬಿಟ್ಟಿಯಾಗಿ ಪಡೆದವರಿಗೆ 25ಸಾವಿರ ರೂ. ದಂಡ ತೀರಾ ಕಡಿಮೆ ಮೊತ್ತವಾಗಿದೆ.
  •     ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ಕ್ಕೆ ವಿಶೇಷ ಅಧಿಕಾರ ಇಲ್ಲವಾಗಿದೆ.
  •     ಸರಕಾರವೇ ಅಭಿವೃದ್ಧಿ ಹೆಸರಿನಲ್ಲಿ ಸರಕಾರಿ ಒತ್ತುವರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ, ಅಂತಹ ಭೂಮಿಯನ್ನು ಒತ್ತುವರಿ ತೆರವುಗೊಳಿಸುವಂತಹ ಅಧಿಕಾರ ಇಲ್ಲವಾಗಿದೆ.
  •     ‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ಕ್ಕೆ ರಾಜ್ಯವ್ಯಾಪಿ ಕಾರ್ಯಾಚರಣೆ ಮಾಡುವಂತಹ ಅಧಿಕಾರವಿದೆ ಎಂದು ಕಾನೂನು ಸಚಿವರು ಹೇಳಿದ್ದು, ಸದ್ಯಕ್ಕೆ ನಗರ ಹಾಗೂ ಪಟ್ಟಣಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲಿ ಎಂದು ಮತ್ತೊಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News