ಸಜೀವ ರಾಜಕಾಲುವೆಗಳ ಮೇಲಿನ ಕಟ್ಟಡಗಳ ತೆರವು: ಸಚಿವ ಜಯಚಂದ್ರ

Update: 2016-08-31 18:15 GMT

ಬೆಂಗಳೂರು, ಆ. 31: ಕೊಳಚೆ ನೀರು ಮತ್ತು ಮಳೆ ನೀರು ಸರಾಗವಾಗಿ ಹರಿದು ಹೋಗುವ ಸಜೀವ ರಾಜಕಾಲುವೆಗಳ ಮೇಲಿನ ಎಲ್ಲ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
 ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹೈಕೋರ್ಟ್ ವಿಭಾಗೀಯ ಪೀಠ 2011ರಲ್ಲಿ ನೀಡಿದ ತೀರ್ಪು ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದನ್ವಯ ರಾಜಕಾಲುವೆಯ ಮೇಲಿನ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದರು.
ಯಾವುದೇ ತಾರತಮ್ಯ ಇಲ್ಲದೆ, ಕಂದಾಯ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ನಗರ ಯೋಜನಾ ಇಲಾಖೆ ಸಮನ್ವಯತೆಯಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಜಯಚಂದ್ರ ತಿಳಿಸಿದರು.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ತೀರ್ಪು ಕೇವಲ ಬೆಂಗಳೂರು ಮಹಾನಗರಕ್ಕೆ ಸೀಮಿತವಾಗಿದ್ದು, ಇದು ಯಾವುದೇ ಕಾರಣಕ್ಕೂ ರಾಜ್ಯವ್ಯಾಪಿ ಅನ್ವಯಿಸುವುದಿಲ್ಲ ಎಂದು ಜಯಚಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 ಆತಂಕ ಬೇಡ: ರಾಜಕಾಲುವೆಗಳ ಮೇಲೆ ಮನೆ ನಿರ್ಮಿಸಿದ್ದರೆ ಅಥವಾ ನಿವೇಶನ ಹೊಂದಿದ್ದರೆ ಅವುಗಳನ್ನು ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸರ್ವೇಕ್ಷಕರು, ರಾಜಕಾಲುವೆ ಪ್ರದೇಶದ ಸುತ್ತಮುತ್ತ ಗೊಂದಲ ಸೃಷ್ಟಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜಕಾಲುವೆ ಪ್ರದೇಶವನ್ನು ಹೊರತುಪಡಿಸಿ ಬೇರಾವುದೇ ಪ್ರದೇಶದಲ್ಲಿನ ಕಟ್ಟಡಗಳನ್ನುಒಡೆಯುವುದಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ ಎಂದು ಅಭಯ ನೀಡಿದರು.
ಸರಕಾರದ ನಿಲುವಿನಲ್ಲಿ ಯಾವುದೇ ದ್ವಂದ್ವವಿಲ್ಲ. ಕೆರೆಗಳ ಒತ್ತುವರಿ ಕುರಿತಂತೆ ಸದನ ಸಮಿತಿ ಸರಕಾರಕ್ಕೆ ಸದ್ಯದಲ್ಲಿ ವರದಿ ನೀಡಲಿದೆ. ಒತ್ತುವರಿ ತೆರವು ವಿಚಾರದಲ್ಲಿ ನಮ್ಮ ಸರಕಾರ ದೃಢ ನಿರ್ಧಾರ ತೆಗೆದುಕೊಂಡ ಹಿನ್ನೆಲೆಯಲ್ಲಿಯೆ ಸದನ ಸಮಿತಿ ರಚಿಸಿದೆ. ನ್ಯಾಯಾಲಯದ ತೀರ್ಪು ಹಾಗೂ ಇಂದಿನ ವಿಧಾನಮಂಡಲದ ಸದನ ಸಮಿತಿ ವರದಿ ಆಧರಿಸಿ ತೆರವು ಕಾರ್ಯವನ್ನು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಅಂತೆಯೆ, ಸಜೀವ ಕೆರೆಗಳ ಒತ್ತುವರಿ ತೆರವಿಗೂ ಆದ್ಯತೆ ನೀಡಿದೆ ಎಂದು ತಿಳಿಸಿದರು.
 ರಾಜಕಾಲುವೆ ಮೇಲಿದ್ದ 141ಮನೆಗಳನ್ನು ತೆರವುಗೊಳಿಸಿ 29ಎಕರೆ ಪ್ರದೇಶವನ್ನು ಸರಕಾರದ ವಶಕ್ಕೆ ಪಡೆಯಲಾಗಿದೆ. ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಬಡವ -ಶ್ರೀಮಂತನೆಂಬ ತಾರತಮ್ಯ ಮಾಡಿಲ್ಲ. ದುರ್ಬಲರು ಹಾಗೂ ಬಲಾಢ್ಯರು ಎಂಬ ಭೇದ ಮಾಡಿಲ್ಲ. ಕಾನೂನು ರೀತಿಯಲ್ಲಿ ತೆರವು ಕಾಯಾಚರಣೆ ನಡೆಸಲಾಗಿದೆ. ಮುಂದೆಯೂ ತೆರವು ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಮಾಹಿತಿ ನೀಡಿದರು.

‘ಚಲ್ಲಘಟ್ಟ ಕಣಿವೆ ಪ್ರದೇಶದಿಂದ ಬೆಂಗಳೂರಿನ ಸಂಸ್ಕರಿಸಿದ ನೀರನ್ನು ಕೋಲಾರದ ಕೆರೆಗಳಿಗೆ ಹರಿಸುವ ಯೋಜನೆಯ ಪೈಪ್‌ಲೈನ್ ಮಾರ್ಗದಲ್ಲಿ ಬೆಳ್ಳಂದೂರು ಬಳಿ ಪ್ರೆಸ್ಟೀಜ್ ಸಂಸ್ಥೆಗೆ ಸೇರಿದ ಅಪಾ ರ್ಟ್‌ಮೆಂಟ್ ಇದ್ದು, ಅದನ್ನು ತೆರವುಗೊಳಿಸಲು ಸೂಚಿಸಲಾಗಿದೆ. ತ್ಯಾಜ್ಯ ನೀರು ಹರಿಯುವ ನೂರು ಅಡಿಗಳ ಕಾಲುವೆಯನ್ನು ಪ್ರೆಸ್ಟೀಜ್ ಸಂಸ್ಥೆ ಒತ್ತುವರಿ ಮಾಡಿದೆ’
-ಟಿ.ಬಿ.ಜಯಚಂದ್ರ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News