ಹಗುರ ರೈಲು ಯೋಜನೆಗೆ ಹಣ ಕ್ರೋಡೀಕರಣಕ್ಕೆ ಸಂಪುಟ ಅಸ್ತು

Update: 2016-08-31 18:17 GMT

ಬೆಂಗಳೂರು, ಆ.31: ಬೆಂಗಳೂರು ನಗರದಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾಮೂಹಿಕ ಸಂಚಾರ ವ್ಯವಸ್ಥೆ ಜಾರಿಗೆ ತರಲು ನಗರಾಭಿವೃದ್ಧಿ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಜಯಚಂದ್ರ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಬೆಂಗಳೂರು ನಗರದ ಮೆಟ್ರೊ ಹೊರತುಪಡಿಸಿ 42ಕಿ.ಮೀ ಹಗುರ ರೈಲು ಸಂಚಾರದ ನವೀಕೃತ ಮಾದರಿಯ ನಗರಾಭಿವೃದ್ಧಿ ಇಲಾಖೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಅಲ್ಲದೆ, ಸಂಪನ್ಮೂಲ ಕ್ರೋಡೀಕರಣಕ್ಕೆ ಮೀಸಲು ನಿಧಿ ಸ್ಥಾಪನೆಯ ಬಗ್ಗೆ ಪರಿಶೀಲಿಸುವಂತೆ ಸಂಪುಟ ಇಲಾಖೆಗೆ ಸೂಚಿಸಿದೆ ಎಂದರು.
ಇಲ್ಲಿನ ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರ ಸೇರಿದಂತೆ ಹೊರ ವರ್ತುಲ ರಸ್ತೆ ವ್ಯಾಪ್ತಿಯಲ್ಲಿ ಭವಿಷ್ಯದ ದೃಷ್ಟಿಯಿಂದ ಹಗುರ ರೈಲ್ವೆ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಸಂಪನ್ಮೂಲ ಸಂಗ್ರಹಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ ಎಂದರು.

 ಜುಮ್ಮಾಳ ಮತ್ತು ವಿಜಯಪುರ ರೈಲು ನಿಲ್ದಾಣದ ನಡುವೆ ಮೇಲ್ಸೇತುವೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಗೆ ರೈಲ್ವೆ ಮತ್ತು ರಾಜ್ಯ ಸರಕಾರ ಶೇ.50ಃ50ರ ಅನುಪಾತದಲ್ಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಂಪುಟ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯಲ್ಲಿ ಯಾದಗಿರಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರವೀಣ್ ಕುಮಾರ್ ಬಿ.ಸುಂಬಡೆ ಲಂಚ ಪ್ರಕರಣದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೆ ಸಚಿವ ಸಂಪುಟ ಸಭೆ ಸಮ್ಮತಿಸಿದೆ ಎಂದು ಅವರು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕೆ.ರಾಮಶೆಟ್ಟಿ ಅವರನ್ನೂ ಲಂಚ ಸ್ವೀಕರಿಸಿದ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ರೇಷ್ಮೆ ಇಲಾಖೆಯ ಆಡಳಿತಾಧಿಕಾರಿ ಚಲಪತಿ ಅವರನ್ನು ಸಿಎಂ ವಿಶೇಷಾಧಿಕಾರಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಸಂಪುಟ ಸಮ್ಮತಿಸಿದೆ ಎಂದು ಜಯಚಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News