ಇಂಜಿನಿಯರ್‌ಗಳ ವಿರುದ್ಧದ ಎಫ್‌ಐಆರ್‌ಗೆ ತಡೆ

Update: 2016-08-31 18:19 GMT

ಬೆಂಗಳೂರು, ಆ.31: ನಗರದಲ್ಲಿ ಕೆರೆ ಮತ್ತು ರಾಜಕಾಲುವೆ ಗಳ ಒತ್ತುವರಿ ತಡೆಯಲು ವಿಫಲರಾದ ಹಾಗೂ ಒತ್ತುವರಿ ಜಾಗದಲ್ಲಿ ಕಟ್ಟಡ ನಿರ್ಮಿಸಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಬಿಬಿಎಂಪಿಯ ನಾಲ್ವರು ಇಂಜಿನಿಯರ್‌ಗಳ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

    ಪ್ರಕರಣ ಸಂಬಂಧ ತಮ್ಮ ವಿರುದ್ಧ ಬಿಎಂಟಿಎಫ್ ದಾಖಲಿಸಿದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ ಎಂ.ಎಲ್.ಮುನಿಕೃಷ್ಣ, ಮಹದೇವಪುರ ವಲಯದ ಪಟ್ಟಣ ಯೋಜನಾ ಸಹಾಯಕ ನಿರ್ದೇಶಕ ಪಿ.ಗಂಗಪ್ಪ, ಸಹಾಯಕ ಇಂಜಿನಿಯರ್ ಎಚ್.ಸುನೀತಾ ಮತ್ತು ದಾಸರಹಳ್ಳಿ ಪಟ್ಟಣ ಯೋಜನೆ ಸಹಾಯಕ ನಿರ್ದೇಶಕ ಎಂ.ಲಿಯಾಕತ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಜೊತೆಗೆ, ಎಫ್‌ಐಆರ್‌ಗೆ ತಡೆಯಾಜ್ಞೆ ನೀಡುವಂತೆ ಮಧ್ಯಾಂತರ ಮನವಿ ಮಾಡಿದ್ದರು.
  ಬುಧವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಆನಂದ ಭೈರಾರೆಡ್ಡಿ ಅವರಿದ್ದ ಏಕ ಸದಸ್ಯ ಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿತು.

   ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಎಫ್‌ಐಆರ್‌ನಲ್ಲಿ ಅರ್ಜಿದಾರರ ವಿರುದ್ಧ ಪ್ರಜ್ಞಾಪೂರ್ವಕ ಅಪರಾಧ ಕೃತ್ಯಗಳ ಬಗ್ಗೆ ಆರೋಪವಿದೆ. ಸರಕಾರದ ಆದೇಶ ಪರಿಗಣಿಸಿ ಎಫ್‌ಐಆರ್ ದಾಖಲಿಸಿದೆ. ಆದರೆ, ಅರ್ಜಿದಾರರು ಮೇಲೆ ಪ್ರಜ್ಞಾಪೂರ್ವಕವಲ್ಲದ ಅಪರಾಧ ಕೃತ್ಯಗಳ ಆರೋಪಗಳಿರುವುದು ಸರಕಾರದ ಆದೇಶದಿಂದ ತಿಳಿಯಲಿದೆ. ಪ್ರಜ್ಞಾಪೂರ್ವಕವಲ್ಲದ ಕೃತ್ಯಗಳ ಬಗ್ಗೆ ಎಫ್‌ಐಆರ್ ದಾಖಲಿಸುವ ಮುನ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪೂರ್ವಾನುಮತಿ ಪಡೆಯಬೇಕು. ಬಿಎಂಟಿಎಫ್ ಪೂರ್ವಾನುಮತಿ ಪಡೆಯದಿರುದ ಕಾರಣ ಅರ್ಜಿದಾರರ ಮೇಲಿನ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡುವಂತೆ ಕೋರಿದರು. ಈ ವಾದ ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿತು. ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಖಾಸಗಿ ವ್ಯಕ್ತಿ ಎಲ್.ಕೆ. ಸತ್ಯನಾರಾಯಣ ಅವರಿಗೆ ಗುರುವಾರ ಬಿಎಂಟಿಎಫ್ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ.
ಪ್ರಕರಣವೇನು?:  
  ಇತ್ತೀಚೆಗೆ ಬಿದ್ದ ಮಳೆಗೆ ನಗರದ ಹಲವೆಡೆ ಪ್ರವಾಹ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿ ಸಿದ್ದ ಮುಖ್ಯಮಂತ್ರಿಗಳು, ರಾಜಕಾಲುವೆ ಒತ್ತುವರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದರು. ಅದರಂತೆ ಬಿಬಿಎಂಪಿಯ 13 ಅಧಿಕಾರಿಗಳನ್ನು ಅಮಾನತು ಗೊಳಿಸಿದ್ದ ಸರಕಾರ, ನಿವೃತ್ತ ಏಳು ಅಧಿಕಾರಿಗಳ ವಿರುದ್ಧ ಬಿಎಂಟಿಎಫ್‌ನಲ್ಲಿ ದೂರು ನೀಡಿತ್ತು. ಅದರಂತೆ ಅಧಿಕಾರಿಗಳ ವಿರುದ್ಧ ಆಗಸ್ಟ್ 6ರಂದು ಎಫ್‌ಐಆರ್ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News