ವೈಮಾನಿಕ ನೀತಿ ತಿದ್ದುಪಡಿಗೆ ಸಚಿವ ಸಂಪುಟ ತೀರ್ಮಾನ

Update: 2016-08-31 18:21 GMT

ಬೆಂಗಳೂರು, ಆ. 31: ಏಷ್ಯಾದಲ್ಲಿಯೇ ಕರ್ನಾಟಕ ರಾಜ್ಯವನ್ನು ವೈಮಾನಿಕ ಕ್ಷೇತ್ರದಲ್ಲಿ ಆಕರ್ಷಣೀಯ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ‘ಕರ್ನಾಟಕ ವೈಮಾನಿಕ ನೀತಿ 2013-23’ರ ತಿದ್ದುಪಡಿಗೆ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.
ಬುಧವಾರ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ಹೂಡಿಕೆದಾರರ ಸಮಾವೇಶದಲ್ಲಿ ಆದ ಒಪ್ಪಂದದಂತೆ 14,520 ಕೋಟಿ ರೂ.ಬಂಡವಾಳ ಹೂಡಿಕೆ, 10ಸಾವಿರ ಉದ್ಯೋಗ ಸೃಷ್ಟಿಸಿರುವ 33 ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.
ವೈಮಾನಿಕ ಕ್ಷೇತ್ರಕ್ಕೆ ಬೇಕಾಗುವ ಎಲ್ಲ್ಲ ಉಪಕರಣಗಳ ವಿನ್ಯಾಸ ಹಾಗೂ ಉತ್ಪಾದನೆ ಬಹುತೇಕ ಕರ್ನಾಟಕದಲ್ಲಿ ನಡೆಯುತ್ತಿದ್ದು, ಆ ಹಿನ್ನೆಲೆ ಯಲ್ಲಿ ಕರ್ನಾಟಕ ತನ್ನ ನಾಯಕತ್ವ ಕಾಯ್ದುಕೊಳ್ಳಲು ಅನುವಾಗುವಂತೆ ವೈಮಾನಿಕ ನೀತಿಗೆ ತಿದ್ದುಪಡಿ ತರಲಾಗುತ್ತಿದೆ. ಕೈಗಾರಿಕಾ ನೀತಿ ಅನ್ವಯ ವೈಮಾನಿಕ ಕ್ಷೇತ್ರದಲ್ಲಿ ಹೂಡಿಕೆದಾರರಿಗೆ ರಿಯಾಯಿತಿಯನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಣೆ ನೀಡಿದರು.
ತುಮಕೂರಿನಲ್ಲಿ ಹೆಲಿಕಾಪ್ಟರ್ ಘಟಕ, ಚಿತ್ರದುರ್ಗದ ಚಳ್ಳಕೆರೆಯಲ್ಲಿ ರಕ್ಷಣಾ ಸಂಶೋಧನೆ-ಅಭಿವೃದ್ಧಿ ಸಂಸ್ಥೆಯಲ್ಲೂ ಪರ್ಯಾಯವಾಗಿ ಸಂಶೋಧನಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಮೈಸೂರು, ಬೆಳಗಾವಿಯಲ್ಲಿ ವೈಮಾನಿಕ ಉಪಕರಣಗಳ ಕೈಗಾರಿಕಾ ಘಟಕಗಳಿವೆ. ರಾಷ್ಟ್ರದ ಶೇ.40ರಷ್ಟು ವೈಮಾನಿಕ ಉಪಕರಣಗಳು ರಾಜ್ಯದಲ್ಲಿ ಉತ್ಪಾದನೆ ಆಗುತ್ತಿವೆ. ಆದಕಾರಣ, ಈ ಕ್ಷೇತ್ರದಲ್ಲಿ ಅತಿಹೆಚ್ಚು ಮಾನವ ಸಂಪನ್ಮೂಲ ಹೊಂದುವ ಉದ್ದೇಶದಿಂದ ವೈಮಾನಿಕ ನೀತಿಗೆ ತಿದ್ದುಪಡಿ ತರಲಾಗುತ್ತಿದೆ ಎಂದು ವಿವರಿಸಿದರು.
 ಔಷಧೀಯ ನೀತಿ: ‘ಕೈಗಾರಿಕಾ ನೀತಿ’ಯ ಭಾಗವಾಗಿರುವ ಔಷಧೀಯ ನೀತಿಗೂ ಕೆಲ ಬದಲಾವಣೆಗೆ ಸಂಪುಟ ಅನುಮೋದನೆ ನೀಡಿದೆ. ವೈದ್ಯಕೀಯ ಸಾಧನೆ ಉತ್ಪಾದನೆ ಗುರುತಿಸಿ ಉತ್ತೇಜನ ನೀಡುವ ಉದ್ದೇಶದಿಂದ ಬಜೆಟ್‌ನಲ್ಲಿ ಘೋಷಿಸಿದಂತೆ ಕೆಲ ತಿದ್ದುಪಡಿಗೆ ಸಂಪುಟ ಸಮ್ಮತಿಸಿದೆ.

ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಆ ಹಿನ್ನೆಲೆಯಲ್ಲಿ ಬದಲಾವಣೆಗೆ ಸರಕಾರ ಉದ್ದೇಶಿಸಿದೆ ಎಂದ ಅವರು, ರಾಜ್ಯದಲ್ಲಿ ಏಳು ಹೊಸ ಅರೆವೈದ್ಯಕೀಯ ವಿದ್ಯಾಲಯ(ಪ್ಯಾರಾ ಮೆಡಿಕಲ್ ಸಂಸ್ಥೆ)ಗಳನ್ನು ಪ್ರಾರಂಭಿಸಲು ಸಂಪುಟ ತೀರ್ಮಾನಿಸಿದೆ. ಇದರಿಂದ ಮಂಗಳೂರು, ಉಡುಪಿ, ಹಾನಗಲ್ ಹಾಗೂ ಬೆಂಗಳೂರಿನಲ್ಲಿ ಒಟ್ಟು ಏಳು ಸಂಸ್ಥೆಗಳಿಂದ 320 ಕ್ಕೂ ಹೆಚ್ಚು ಸೀಟುಗಳು ಹೆಚ್ಚುವರಿಯಾಗಿ ಮಂಜೂರು ಮಾಡುವಂತೆ ರಾಜ್ಯ ಸಂಪುಟವು ಅರೆ ವೈದ್ಯಕೀಯ ಮಹಾ ಮಂಡಳಿಗೆ ಶಿಫಾರಸು ಮಾಡಿದೆ ಎಂದು ಅವರು ಹೇಳಿದರು.
200 ಹೊಯ್ಸಳ: ಪೊಲೀಸ್ ಇಲಾಖೆಗೆ 14.31 ಕೋಟಿ ರೂ.ವೆಚ್ಚದಲ್ಲಿ 50 ಹೊಸ ಬಸ್‌ಗಳು ಮತ್ತು 200 ಹೊಯ್ಸಳ ಹಾಗೂ ಗರುಡ ಮಾದರಿಯ ವಾಹನಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News