ಪಡಿತರ ಚೀಟಿ ವಿತರಣೆಯಲ್ಲಿ ಅವ್ಯವಹಾರ: ತನಿಖೆ ಸೂಚನೆ
ಮೂಡಿಗೆರೆ, ಸೆ.1: ಪಡಿತರ ಚೀಟಿ ವಿತರಣೆಯಲ್ಲಿ ಉಳ್ಳವರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಸಲುವಾಗಿ ಬಿಪಿಎಲ್ ಕಾರ್ಡ್ ವಿತರಣೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತನಗೆ ತಿಳಿಯಬೇಕು. ಈ ಬಗ್ಗೆ ವರದಿ ನೀಡಬೇಕೆಂದು ಶಾಸಕ ಬಿ.ಬಿ.ನಿಂಗಯ್ಯ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಅವರು ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಡಿತರ ಚೀಟಿ ವಿತರಣೆಯಾಗಿರುವ ಬಗ್ಗೆ ಮಾಹಿತಿ ಪಡೆದ ಅವರು, ಕಳೆದ ನಾಲ್ಕೈದು ವರ್ಷಗಳಿಂದ ವಿತರಣೆಯಾಗುತ್ತಿರುವ ಪಡಿತರ ಚೀಟಿಯಲ್ಲಿ ಬಿಪಿಎಲ್ ಕಾರ್ಡ್‌ನ್ನು ಅರ್ಹರಿಗೆ ನೀಡದೆ ಉಳ್ಳವರಿಗೆ ನೀಡಲಾಗಿದೆ. ಇದು ಹೇಗೆ ಸಾಧ್ಯವಾಗಿದೆ. ಈ ವರ್ಷದಲ್ಲಿ 2 ಸಾವಿರ ಬಿಪಿಎಲ್ ಪಡಿತರ ಚೀಟಿ ರದ್ದಾಗಿರುವುದನ್ನು ಗಮನಿಸಿದರೆ ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ಇಷ್ಟೆಲ್ಲಾ ಕಾರ್ಡ್‌ಗಳನ್ನು ವಿತರಣೆ ಮಾಡಿದ ಸಂದರ್ಭದಲ್ಲಿ ತಹಶೀಲ್ದಾರರು, ಗ್ರಾಮ ಲೆಕ್ಕಿಗರು ಯಾರು ಇದ್ದರೆಂಬುದು ಪರಿಶೀಲನೆ ನಡೆಸಿ ವರದಿ ನೀಡಬೇಕು. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ತಿಳಿಸಿದರು.
ಜಿಪಂ ವತಿಯಿಂದ ತಾಲೂಕಿನಲ್ಲಿ ಅನೇಕ ಕಾಮಗಾರಿಗಳು ನಡೆಯುತ್ತಿದ್ದು, ಅದು ಜನಪ್ರತಿನಿಧಿಗಳ ಗಮನಕ್ಕೆ ಬರುತ್ತಿಲ್ಲ. ಗಿರಿಜನ ಕಾಲನಿ ಸೇರಿದಂತೆ ವಿವಿಧ ಕಾಂಕ್ರಿಟ್ ಕಾಮಗಾರಿಗಳಿಗೆ ಜಿಪಂ ಎಇಇ ಮತ್ತು ಇಂಜಿನಿಯರ್‌ಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕ್ರಿಯಾಯೋಜನೆ ತಯಾರಿಸಿ ಅದಕ್ಕೆ ಹಣ ತಂದು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಜನಪ್ರತಿನಿಧಿಗಳ ಗಮನಕ್ಕೆ ತರದೇ ಕೆಲಸ ಮಾಡುವುದರ ಜೊತೆಗೆ ಹಣಕ್ಕಾಗಿ ಕಳಪೆ ಕಾಮಗಾರಿಗಳನ್ನೆ ಹೆಚ್ಚಾಗಿ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯೆ ಡಾ.ಮೋಟಮ್ಮ ಮಾತನಾಡಿ, ನಿರಾಶ್ರಿತರಿಗೆ ಸೈಟ್ ನೀಡಲು ಸರಕಾರದಿಂದ ಆದೇಶವಿದ್ದರೂ ಜಾಗ ನೀಡಲು ನಿಮಗೇನು ಕಷ್ಟ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಮರೆಬೈಲು, ಹಂತೂರು, ಬಾನಳ್ಳಿ ಭಾಗದಲ್ಲಿ ಹಕ್ಕು ಪತ್ರ ನೀಡಿದ್ದಾರೆ. ಆದರೆ ಹಂತೂರು ಭಾಗದ ನಿರಾಶ್ರಿತರಿಗೆ ಇದುವರೆಗೂ ಹಕ್ಕು ಪತ್ರ ನೀಡಿಲ್ಲ. ಅದನ್ನು ಶೀಘ್ರವಾಗಿ ವಿತರಣೆ ಮಾಡಬೇಕು ಎಂದ ಅವರು, ಸರಕಾರದ ಯೋಜನೆ ಬಗ್ಗೆ ಆಯಾ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆೆ ನಡೆಸಿ ಜನರಿಗೆ ಮಾಹಿತಿ ನೀಡಬೇಕು. ಯೋಜನೆಗಳನ್ನು ಜನರಿಗೆ ತಲುಪುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ತಾಪಂ ಅಧ್ಯಕ್ಷ ರತನ್ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಕುಡಿಯುವ ನೀರಿಗೆ ಕೆಲ ಭಾಗಗಳಲ್ಲಿ ಬರ ಬಂದಿತ್ತು. ಈ ವರ್ಷ ಮಳೆಯಿಲ್ಲದೆ ಮುಂದಿನ ವರ್ಷದಲ್ಲಿ ಎಲ್ಲ ಕಡೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಮುಂಜಾಗ್ರತೆಯನ್ನು ಈಗಲೇ ಮಾಡಬೇಕಾಗಿದ್ದು, ಪ್ರತಿ ಗ್ರಾಪಂನಲ್ಲಿ 14ನೆ ಹಣಕಾಸು ಯೋಜನೆಯಲ್ಲಿ ಒಂದೊಂದು ಟ್ಯಾಂಕರ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.