ಪಪಂ ಅಧ್ಯಕ್ಷ, ಕಿರಿಯ ಅಭಿಯಂತರ ಎಸಿಬಿ ಬಲೆಗೆ
ಸಾಗರ,ಸೆ.1: ತಾಲೂಕಿನ ಕಾರ್ಗಲ್-ಜೋಗ್ ಪಪಂ ಅಧ್ಯಕ್ಷ ಹಾಗೂ ಕಿರಿಯ ಅಭಿಯಂತರರನ್ನು ದಾವಣಗೆರೆ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಬುಧವಾರ ಲಂಚ ಸ್ವೀಕರಿಸುವಾಗ ವಶಕ್ಕೆ ಪಡೆದಿದ್ದಾರೆ. ಕಾರ್ಗಲ್‌ನ ಗುತ್ತಿಗೆದಾರರಾದ ದೇವೇಂದ್ರ ಎಂಬವರು ಪಪಂ ವ್ಯಾಪ್ತಿಯಲ್ಲಿ ನಿರ್ವಹಿಸಿದ ಕಾಮಗಾರಿಗೆ ಸಂಬಂಧಪಟ್ಟಂತೆ ಅಂತಿಮ ಬಿಲ್ ನೀಡಲು ಪಪಂ ಅಧ್ಯಕ್ಷ ವೆಂಕಟೇಶ್ ಪುತ್ತಾ ಹಾಗೂ ಕಿರಿಯ ಅಭಿಯಂತರ ಬಸವರಾಜ್ ಎಂಬವವರು ಗುತ್ತಿಗೆದಾರರಿಗೆ ಸತಾಯಿಸುತ್ತಿದ್ದರು. ಕಾರ್ಗಲ್‌ನ ಚಾಮುಂಡೇಶ್ವರಿ ದೇವಸ್ಥಾನ ಬಳಿ ದೇವೇಂದ್ರ ಅವರು, 15 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ಕಾಮಗಾರಿ ಗುತ್ತಿಗೆ ಪಡೆದು ಪೂರ್ಣಗೊಳಿಸಿದ್ದರು. ಕಾಮಗಾರಿಗೆ ಸಂಬಂಧಪಟ್ಟಂತೆ 10 ಲಕ್ಷ ರೂ. ಪಾವತಿ ಮಾಡಲಾಗಿತ್ತು. ಉಳಿದ 5 ಲಕ್ಷ ರೂ. ಅಂತಿಮ ಬಿಲ್ ಪಾವತಿ ಮಾಡಲು ಪಪಂ ಅಧ್ಯಕ್ಷರು ಹಾಗೂ ಕಿರಿಯ ಅಭಿಯಂತರರು 15 ದಿನದಿಂದ ಸತಾಯಿಸುತ್ತಿದ್ದರು. ಕಾಮಗಾರಿ ಮುಗಿದಿದ್ದರೂ ಬಿಲ್ ಪಾವತಿ ಮಾಡಲು ಪಪಂ ಅಧ್ಯಕ್ಷರು ಹಾಗೂ ಕಿರಿಯ ಅಭಿಯಂತರರು ಕಮೀಶನ್ ಕೊಡುವಂತೆ ಪೀಡಿಸುತ್ತಿದ್ದರಿಂದ ಕೋಪಗೊಂಡಿದ್ದ ಗುತ್ತಿಗೆದಾರ ದೇವೇಂದ್ರ ಅವರು, ಕಮೀಷನ್ ರೂಪದಲ್ಲಿ ಲಂಚದ ಬೇಡಿಕೆ ಇಡುತ್ತಿರುವ ಪಪಂ ಅಧ್ಯಕ್ಷ ವೆಂಕಟೇಶ್ ಪುತ್ತಾ ಹಾಗೂ ಪಪಂ ಕಿರಿಯ ಅಭಿಯಂತರ ಬಸವರಾಜ್ ವಿರುದ್ಧ ದಾವಣಗೆರೆ ಎಸಿಬಿಗೆ ದೂರು ನೀಡಿದ್ದರು. ಬುಧವಾರ ದೇವೇಂದ್ರ ಅವರು, ಅಂತಿಮ ಬಿಲ್ ಪಾಸ್ ಮಾಡಿಕೊಡುವಂತೆ ಪಪಂ ಅಧ್ಯಕ್ಷ ವೆಂಕಟೇಶ್ ಪುತ್ತಾ ಅವರಿಗೆ 4 ಸಾವಿರ ರೂ. ಕಿರಿಯ ಅಭಿಯಂತರ ಬಸವರಾಜ್ ಅವರಿಗೆ 3ಸಾವಿರ ರೂ. ಲಂಚ ನೀಡುತ್ತಿದ್ದಾಗ, ದಾವಣಗೆರೆ ವಿಭಾಗದ ಎಸಿಬಿಯ ಎಸ್ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ಶಿವಮೊಗ್ಗ ಎಸಿಬಿ ಇನ್‌ಸ್ಪೆಕ್ಟರ್ ರಮೇಶ್ ಕೆ. ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳನ್ನು ವಶಕ್ಕೆ ಪಡೆದಿದೆ. ಈ ಸಂಬಂಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಕೈಗೊಂಡಿದೆ.