×
Ad

ಗ್ರಾಮ ಸಹಾಯಕರಿಗೆ ಮಚ್ಚು ತೋರಿಸಿ ಬೆದರಿಕೆ

Update: 2016-09-01 22:38 IST

ಸಾಗರ, ಸೆ.1: ತಾಲೂಕಿನ ಉಳ್ಳೂರು ಗ್ರಾಪಂನ ಸರ್ವೇ ನಂ. 98ರಲ್ಲಿ ಒತ್ತುವರಿ ತೆರವು ಮಾಡಲು ಹೋಗಿದ್ದಾಗ ಒತ್ತುವರಿದಾರರು ಕಂದಾಯ ಇಲಾಖೆಯ ಗ್ರಾಮ ಸಹಾಯಕರಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ ಪ್ರಕರಣ ಬುಧವಾರ ನಡೆದಿದೆ. ಉಳ್ಳೂರು ಗ್ರಾಪಂನ ಸರ್ವೇ ನಂ. 98ರಲ್ಲಿ ಸೊಪ್ಪಿಬೆಟ್ಟ ಹಾಗೂ ದನಗಳಿಗೆ ಮುಫತ್ತು, ನಕ್ಷತ್ರವನಕ್ಕಾಗಿ ಮೀಸಲಿರಿಸಿದ್ದ 3 ಎಕರೆ ಜಾಗವನ್ನು ಕೆಇಬಿ ಲೈನ್‌ಮನ್ ಆಗಿ ಕೆಲಸ ಮಾಡುತ್ತಿರುವ ಪ್ರಕಾಶ್ ಎಂಬವರು ಒತ್ತುವರಿ ಮಾಡಿಕೊಂಡಿರುವ ಕುರಿತು ಮೂರು ದಿನಗಳ ಹಿಂದೆ ಉಳ್ಳೂರು ಗ್ರಾಪಂ ಆಡಳಿತ ಮತ್ತು ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಇದಕ್ಕೂ ಮೊದಲು ಈ ಭಾಗದ ಪರಿಶಿಷ್ಟ ವರ್ಗದವರು ಜಮೀನು ಒತ್ತುವರಿ ಮಾಡುವಂತೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಬುಧವಾರ ತಹಶೀಲ್ದಾರ್ ಎನ್.ಟಿ. ಧರ್ಮೋಜಿರಾವ್ ನೇತೃತ್ವದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರ್ ಆನಂದ ನಾಯಕ್, ಗ್ರಾಮ ಲೆಕ್ಕಾಧಿಕಾರಿ ರಘು ಹಾಗೂ ಗ್ರಾಮ ಸಹಾಯಕರು ಜಮೀನು ಒತ್ತುವರಿ ತೆರವಿಗೆ ಹೋಗಿದ್ದರು.

ಈ ವೇಳೆ ಗ್ರಾಮ ಸಹಾಯಕರಾದ ಆನಂದ, ಅಣ್ಣಪ್ಪ, ಶಿವಕುಮಾರ್, ನಾಗರಾಜ್, ಹರೀಶ್, ಮಂಜು ಇನ್ನಿತರರು ಬೇಲಿ ತೆರವಿಗೆ ಮುಂದಾದಾಗ ಲೈನ್‌ಮನ್ ಪ್ರಕಾಶ್ ಮತ್ತು ಲಿಂಗರಾಜ್ ಎಂಬವರು ಮಚ್ಚು ಎತ್ತಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಉಳ್ಳೂರು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು. ಕ್ಷಣಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ತಕ್ಷಣ ಗ್ರಾಮಸ್ಥರು ಗ್ರಾಮ ಸಹಾಯಕರಿಗೆ ಮಚ್ಚು ತೋರಿಸಿದ ಇಬ್ಬರನ್ನು ಹಿಡಿದು ಗ್ರಾಮಾಂತರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎನ್.ಟಿ. ಧರ್ಮೋಜಿರಾವ್ ಪ್ರಕಾಶ್ ಹಾಗೂ ಲಿಂಗರಾಜ್ ವಿರುದ್ಧ್ದ ದೂರು ದಾಖಲಿಸಿದ್ದಾರೆ. ಅಕ್ರಮ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಮಚ್ಚು ಹಿಡಿದು ಬೆದರಿಕೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಎನ್.ಟಿ. ಧರ್ಮೋಜಿರಾವ್, ಇತ್ತೀಚಿನ ದಿನಗಳಲ್ಲಿ 94ಸಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಕೆಲವರು ರಾತ್ರೋರಾತ್ರಿ ಸರಕಾರಿ ಜಾಗದಲ್ಲಿ ಟೆಂಟ್ ನಿರ್ಮಿಸಿ, ಜಮೀನು ಕಬಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News