×
Ad

ಕಾವಲು ಸಮಿತಿಸಕ್ರಿಯವಾಗಿ ಕಾರ್ಯನಿರ್ವಹಿಸಲಿ: ಎಸಿ

Update: 2016-09-01 22:39 IST

 ಕಾರವಾರ, ಸೆ.1: ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಣೆಯನ್ನು ತಡೆಯಲು ಗ್ರಾಮಮಟ್ಟದಲ್ಲಿ ರಚಿಸಲಾಗಿರುವ ಕಾವಲು ಸಮಿತಿಗಳು ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರು ಹೇಳಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಿತಿಗಳ ಸಭೆಯಲ್ಲಿ ಅವರು ಮಾತನಾಡಿದರು.

 ಮುಂಡಗೋಡ ಮತ್ತು ಹಳಿಯಾಳ ಭಾಗದಲ್ಲಿ ಮಹಿಳೆಯರನ್ನು ಮದುವೆ ಸೇರಿದಂತೆ ಇನ್ನಿತರ ಆಮಿಷಗಳ ಹೆಸರಿನಲ್ಲಿ ಕಳ್ಳಸಾಗಣೆ ನಡೆಸುವ ಪ್ರಕರಣಗಳು ನಡೆಯುತ್ತಿವೆ ಎಂದು ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಅವರು, ಪ್ರತೀ ಗ್ರಾಪಂ ಮಟ್ಟದಲ್ಲಿ ರಚಿಸಲಾಗಿರುವ ಕಾವಲು ಸಮಿತಿಗಳು ಇಂತಹ ಬೆಳವಣಿಗೆಗಳ ಮೇಲೆ ನಿಗಾ ಇರಿಸಬೇಕು. ಬಾಲ್ಯ ವಿವಾಹ ಕೆಲಸದ ನೆಪದಲ್ಲಿ ಅಥವಾ ಮದುವೆ ಹೆಸರಿನಲ್ಲಿ ನಡೆಯುವ ಕಳ್ಳ ಸಾಗಣೆ ಹಾಗೂ ಇತ್ಯಾದಿ ಚಟುವಟಿಕೆಗಳ ಮಾಹಿತಿಯನ್ನು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಕೌಟುಂಬಿಕ ದೌರ್ಜನ್ಯ:

ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಜಿಲ್ಲೆಯಲ್ಲಿ ಈ ವರ್ಷ 26ಪ್ರಕರಣಗಳು ದಾಖಲಾಗಿದ್ದು, ತನಿಖೆಯ ವಿವಿಧ ಹಂತದಲ್ಲಿವೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಸಿಡಿಪಿಒ) ಈ ಕಾಯ್ದೆಯ ಸಂರಕ್ಷಣಾಧಿಕಾರಿಗಳಾಗಿದ್ದು, ತಮ್ಮ ಹತ್ತಿರ ಯಾವುದೇ ದೂರು ಬಂದರೂ ಎಫ್‌ಐಆರ್. ಆಗಿದೆ ಎಂದು ತಿರಸ್ಕರಿಸುವಂತಿಲ್ಲ. ಎಲ್ಲ 11ಸಿಡಿಪಿಒ ಕಚೇರಿಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಆಯ್ಕೆಯಾದ ವಕೀಲರು ಪ್ರತೀ ಬುಧವಾರ ಮತ್ತು ಶನಿವಾರ ಬಂದು ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜೇಂದ್ರ ಬೇಕಲ್ ಹೇಳಿದರು.

ಬಾಲ್ಯ ವಿವಾಹ: ಜಿಲ್ಲೆಯಲ್ಲಿ ಪ್ರಸ್ತುತ ವರ್ಷ 34ಬಾಲ್ಯ ವಿವಾಹ ಪ್ರಕರಣಗಳಲ್ಲಿ ವಿವಾಹ ತಡೆಯಲಾಗಿದೆ. ಬಾಲ್ಯ ವಿವಾಹಕ್ಕೆ ಪ್ರಚೋದಿಸುವ ಮತ್ತು ಶಾಮೀಲಾಗುವ ಪ್ರತಿಯೊಬ್ಬರೂ ತಪ್ಪಿತಸ್ಥರಾಗುತ್ತಾರೆ. ತಪ್ಪಿತಸ್ಥರಿಗೆ 2ವರ್ಷ ಜೈಲು ಹಾಗೂ 1ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಮದುವೆ ನಡೆಸುವ ಪುರೋಹಿತರು ಮಾತ್ರವಲ್ಲದೆ ಛಾಯಾಚಿತ್ರ ತೆಗೆಯುವ ಫೊಟೋಗ್ರಾಫರ್ ಮೇಲೆಯೂ ಪ್ರಕರಣ ದಾಖಲಿಸಬಹುದಾಗಿದೆ ಎಂದು ಸಮಿತಿ ಸದಸ್ಯ ಮುಖ್ಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು.

ಬಾಲ್ಯ ವಿವಾಹ ಪ್ರಕರಣಗಳನ್ನು ತಡೆದ ಬಳಿಕ ಆ ಪ್ರಕರಣಗಳ ಮೇಲೆ ನಿರಂತರ ನಿಗಾ ವಹಿಸಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಥವಾ ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ನೆರವು ನೀಡಬೇಕೆಂದು ಅವರು ಸೂಚಿಸಿದರು.

ಅರ್ಹ ವಿಧವೆಯರು, ವಿಕಲಚೇತನರು, ಮಂಗಳಮುಖಿಯರು ಸೇರಿದಂತೆ ಹಲವು ದುರ್ಬಲರಿಗೆ ಮನೆಗಳನ್ನು ನಿರ್ಮಿಸಲು ಯೋಜನೆಗಳಿದ್ದು, ಅಂಥವರ ಬಳಿ ನಿವೇಶನವಿದ್ದರೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಮನೆಗಳನ್ನು ನಿರ್ಮಿಸಲಾಗುವುದು. ಗ್ರಾಪಂ ಮಟ್ಟದಲ್ಲಿ ಅಂತಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News