ಶಾಂತಿ ಮಾನವೀಯತೆ ಅಭಿಯಾನ ಸಮಿತಿ ಮನವಿ
ಕಾರವಾರ, ಸೆ.1: ದೇಶದಲ್ಲಿ ಹೆಚ್ಚುತ್ತಿರುವ ಕೋಮು ಗಲಭೆ, ಜಾತೀಯತೆ ಮತ್ತು ಧಾರ್ಮಿಕ ನೆಲೆಯಲ್ಲಿನ ಧ್ರುವೀಕರಣ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಾಂತಿ ಮತ್ತು ಮಾನವೀಯತೆ ಅಭಿಯಾನದ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ದೇಶದಲ್ಲಿ ಧಾರ್ಮಿಕ ಮತ್ತು ಜಾತೀಯ ಉದ್ವಿಗ್ನತೆಯಿಂದಾಗಿ ಸಾಮಾಜಿಕವಾಗಿ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ಉದ್ರೇಕಕಾರಿ ಭಾಷಣ ಮತ್ತು ಕೋಮು ಭಾವನೆಗಳನ್ನು ಪ್ರಚೋದಿಸುವ ಕೆಲವು ಮಾಧ್ಯಮಗಳ ಕೋಮು ದ್ವೇಷದ ಬೆಂಕಿಯನ್ನು ಹರಡುವ ಪ್ರಮುಖ ಸಾಧನಗಳಾಗಿವೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಶಾಂತಿ ಮತ್ತು ಸೌಹಾರ್ದದ ಕಾಳಜಿಯುಳ್ಳ ಎಲ್ಲ ಕೋಮು, ಜಾತಿ ಮತ್ತು ಸಾಮಾಜಿಕ ಸ್ತರಗಳ ಜನರಲ್ಲಿ ಕಾರ್ಯಕ್ರಮದ ಬಗ್ಗೆ ವಿವರಿಸಲಾಗಿದೆ. ಅಲ್ಲದೆ, ಸಾಮಾಜಿಕ ಪ್ರಯತ್ನಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಂವಿಧಾನಿಕ ವೌಲ್ಯಗಳ ರಕ್ಷಣೆಯನ್ನು ಖಾತರಿ ಪಡಿಸುವ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಹಿಂಸೆಯ ಪ್ರಚೋದನೆ ಮತ್ತು ಉದ್ರೇಕಕಾರಿ ಭಾಷಣದ ಆರೋಪಗಳಿರುವ ಎಲ್ಲರನ್ನು ಕೂಡಲೇ ಬಂಧಿಸಿ, ತ್ವರಿತಗತಿಯ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯಬೇಕು. ಕೋಮು ಗಲಭೆಗಳನ್ನು ತಡೆಯುವ ಮಸೂದೆಯನ್ನು ಕೂಡಲೇ ಜಾರಿಗೆ ತರಬೇಕು. ಕೋಮು ಗಲಭೆಗಳ ಎಲ್ಲ ಸಂತ್ರಸ್ತರಿಗೆ ಸಂಪೂರ್ಣ ಪರಿಹಾರ ಮತ್ತು ರಕ್ಷಣೆಯನ್ನು ಒದಗಿಸಬೇಕು. ಪತ್ರಿಕಾ ರಂಗದ ಸರ್ವ ಸಾಮಾನ್ಯ ಶಿಷ್ಟಾಚಾರಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಮೀಡಿಯ ಟ್ರಯಲ್ ನಡೆಸುವ, ತಪ್ಪು ಮಾಹಿತಿ ಮತ್ತು ಆಧಾರ ರಹಿತ ಆರೋಪಗಳನ್ನು ಹೊರಿಸಿ ಪ್ರಚಾರ ಮಾಡುತ್ತಿರುವ ಚಾನೆಲ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡಬೇಕು ಎಂದರು. ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಮನವಿ ಸ್ವೀಕರಿಸಿದರು. ಮನವಿ ಸಲ್ಲಿಸುವ ನಿಯೋಗದಲ್ಲಿ ಶಾಂತಿ ಮತ್ತು ಮಾನವೀಯತೆ ಅಭಿಯಾನ ಸಂಚಾಲಕ ಎಂ.ಆರ್. ಮಾನ್ವಿ, ಜಿಲ್ಲಾ ಸ್ವಾಗತ ಸಮಿತಿ ಸಂಚಾಲಕ ತಲ್ಹಾ ಸಿದ್ದಿಬಾಪ, ಸದಸ್ಯರಾದ ಇಮ್ತಿಯಾಝ್ ಶೇಕ್, ಶೇಕ್ ಅಲಿ ಜನಾಬ್, ಖಲಿಲುಲ್ಲಾಹ್ ಖಾನ್, ಮುಹಮ್ಮದ್ ಹನೀಫ್, ಕೆ.ಎಂ. ಶರೀಫ್ ಮತ್ತಿತರರು ಉಪಸ್ಥಿತರಿದ್ದರು.