ನ್ಯಾಯಯಮಂಡಳಿ ಸಲಹೆ ಸ್ವಾಗತಾರ್ಹ: ಸಿದ್ದರಾಮಯ್ಯ
ಬೆಂಗಳೂರು, ಸೆ.1: ಮಹಾದಾಯಿ ನದಿ ನೀರಿನ ವಿವಾದವನ್ನು ಮಾತುಕತೆ ಮೂಲಕ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುವಂತೆ ನ್ಯಾಯಮಂಡಳಿ ನೀಡಿರುವ ಸಲಹೆಯನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕುರಿತು ಪ್ರಧಾನಿ ಹಾಗೂ ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ನ್ಯಾಯಮಂಡಳಿ ಹೇಳಿರುವುದು ಒಳ್ಳೆಯ ಬೆಳವಣಿಗೆ. ನ್ಯಾಯ ಮಂಡಳಿಯೇ ಸಲಹೆ ನೀಡಿರುವುದರಿಂದ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆಗೆ ಸಿದ್ಧರಾಗ ಬಹುದು. ನಾವಂತೂ ತಯಾರಿದ್ದೇವೆ ಎಂದರು.
ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಸರ್ವಪಕ್ಷ ಮುಖಂಡರೊಂದಿಗೆ ಭೇಟಿಯಾದಾಗ ಮತ್ತು ಬರಗಾಲ ಕುರಿತಾದ ಚರ್ಚೆಗೆ ಹೋದಾಗಲೂ ಪ್ರಧಾನಿಯವರಿಗೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು. ನ್ಯಾಯ ಮಂಡಳಿ ಸಲಹೆ ನೀಡಿದ ಬಳಿಕ ಗೋವಾ, ಮಹಾರಾಷ್ಟ್ರ ಪರ ವಕೀಲರು ನಮ್ಮ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ನಾವೂ ಸಲಹೆ ನೀಡುತ್ತೇವೆ ಎಂದಿದ್ದಾರೆ. ನಮ್ಮ ವಕೀಲರೂ ಇದೇ ಮಾತು ಹೇಳಿದ್ದಾರೆ. ಇದು ಸ್ವಾಗತಾರ್ಹ. ಇದ್ಕಕಾಗಿ ನ್ಯಾಯ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು. ವಿವಾದವನ್ನು ಬಗೆಹರಿಸಲು ತಾವು ಮಧ್ಯೆಪ್ರವೇಶ ಮಾಡಬೇಕು ಎಂದು ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಜಲ ಸಂಪನ್ಮೂಲ ಸಚಿವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸುವಂತೆ ಪತ್ರ ಮೂಲಕ ಗೋವಾ ಮುಖ್ಯಮಂತ್ರಿಗಳನ್ನೂ ಕೋರಲಾಗಿತ್ತು. ಈಗ ನ್ಯಾಯ ಮಂಡಳಿಯೇ ಸಲಹೆ ನೀಡಿರುವುದರಿಂದ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆಗೆ ಮುಂದಾಗಬಹುದು. ನಾವೂ ತಯಾರಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು. ಪ್ರಧಾನಿ, ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಶೀಘ್ರವೇ ಪತ್ರ ಬರೆಯುತ್ತೇನೆ. ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಪ್ರಧಾನಿಯನ್ನೂ ಕೋರುತ್ತೇನೆ. ಮಾತುಕತೆಗೆ ಬೆಂಗಳೂರಿಗೆ ಬರುವಂತೆ ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗುವುದು. ಒಂದು ವೇಳೆ ಗೋವಾ ಅಥವಾ ಮಹಾರಾಷ್ಟ್ರ ಸಿಎಂ ಕರೆದರೂ ಮಾತುಕತೆಗೆ ಹೋಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಧಾನಿ ಏನಾದರೂ ಕರೆದರೆ ದಿಲ್ಲಿಗೆ ಹೋಗುತ್ತೇವೆ. ನನ್ನ ಪ್ರಕಾರ ಪ್ರಧಾನಿ ಸಭೆ ಕರೆಯುವುದೇ ಒಳ್ಳೆಯದು. ಮಾತುಕತೆ ಮೂಲಕ ವಿವಾದ ಇತ್ಯರ್ಥ್ಯಕ್ಕೆ ನಾವು ಸಿದ್ಧವಿರುವಾಗ ಎಲ್ಲಾದರೂ ಮಾತುಕತೆ ನಡೆಯಲಿ ಹೋಗಲು ತಯಾರು ಎಂದು ಮುಖ್ಯಮಂತ್ರಿ ತಿಳಿಸಿದರು. ಬಂದ್, ಮುಂಜಾಗ್ರತೆ: ಕಾರ್ಮಿಕ ಸಂಘಟನೆಗಳು ಶುಕ್ರವಾರ ಭಾರತ್ ಬಂದ್‌ಗೆ ಕರೆ ನೀಡಿವೆ. ಸಾರ್ವಜನಿಕರಿಗೆ ಬಂದ್ ನಿಂದ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಜಿಎಸ್‌ಟಿ ವಿಧೇಯಕ: ಜಿಎಸ್‌ಟಿ ವಿಧೇಯಕಕ್ಕೆ ಅನುಮೋದನೆ ನೀಡಲು ಸೆ.14ರಂದು ವಿಧಾನಮಂಡಲ ಉಭಯ ಸದನಗಳ ಅಧಿವೇಶನ ಕರೆಯಲಾಗಿದೆ. ಈಗಾಗಲೇ ಹಲವಾರು ರಾಜ್ಯಗಳು ವಿಧೇಯಕಕ್ಕೆ ಒಪ್ಪಿಗೆ ನೀಡಿವೆ. ಹೊಸ ತೆರಿಗೆ ನೀತಿಯಿಂದ ರಾಜ್ಯಕ್ಕೆ ಆಗುವ ನಷ್ಟವನ್ನು ತುಂಬಿಕೊಡುವಂತೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಕುರಿತು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಇದು ಯುಪಿಎ ಸರಕಾರದ ಕೂಸು. ನಾವೂ ಅದಕ್ಕೆ ಒಪ್ಪಿಗೆ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು. ಮುಖ್ಯಕಾರ್ಯದರ್ಶಿ ನೇಮಕ: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ನೇಮಕದ ಕುರಿತು ಪ್ರತಿಕ್ರಿಯಿಸಿರುವ ಅವರು, ಮುಖ್ಯ ಕಾರ್ಯದರ್ಶಿಗಳ ಸೇವಾ ಅವಧಿಯನ್ನು ಕೇಂದ್ರ ಸರಕಾರ ಮೂರು ತಿಂಗಳು ವಿಸ್ತರಿಸಿದೆ. ಸೆ.30ಕ್ಕೆ ಅವರ ಅವಧಿ ಅಂತ್ಯಗೊಳ್ಳಲಿದೆ. ಹೊಸ ಮುಖ್ಯ ಕಾರ್ಯದರ್ಶಿ ನೇಮಕ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಹೊಸದಿಲ್ಲಿಗೆ ಸಿಎಂ ಪ್ರಯಾಣ
ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಕುರಿತು ಹೈಕಮಾಂಡ್ ಜೊತೆ ಮಾತುಕತೆ ನಡೆಸಲು ಶುಕ್ರವಾರ ಹೊಸದಿಲ್ಲಿಗೆ ಹೋಗುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ