ಝಾಕಿರ್ ನಾಯ್ಕ್ ಎನ್‌ಜಿಒಗೆ ವಿದೇಶಿ ದೇಣಿಗೆ ಪರವಾನಗಿ ನವೀಕರಿಸಿದ ಗೃಹಸಚಿವಾಲಯ

Update: 2016-09-02 03:37 GMT

ಹೊಸದಿಲ್ಲಿ, ಸೆ.2: ಇಸ್ಲಾಮಿಕ್ ಪ್ರವಚನಕಾರ ಝಾಕಿರ್‌ನಾಯ್ಕ್ ನೇತೃತ್ವದ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ (ಐಆರ್‌ಎಫ್) ಎಂಬ ಸ್ವಯಂಸೇವಾ ಸಂಸ್ಥೆಯ ವಿದೇಶಿ ನೆರವು ಪಡೆಯುವ ಲೈಸನ್ಸ್ ನವೀಕರಿಸಿದ ತಪ್ಪಿಗೆ ಇದೀಗ ಗೃಹ ಸಚಿವಾಲಯದ ವಿದೇಶಿ ವಿಭಾಗದ ಜಂಟಿ ಕಾರ್ಯದರ್ಶಿ ಜಿ.ಕೆ.ದ್ವಿವೇದಿ ಸೇರಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ.

ಬಾಂಗ್ಲಾದೇಶಿ ದಾಳಿಕೋರರಿಗೆ ಝಾಕಿರ್ ಅವರ ಪ್ರವಚನ ದಾಳಿಗೆ ಪ್ರೇರಣೆಯಾಗಿದೆ ಎಂಬ ಕಾರಣಕ್ಕೆ ನಾಯ್ಕ್ ವಿರುದ್ಧ ಭಯೋತ್ಪಾದನಾ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲು ಮುಂದಾಗಿರುವ ಕೇಂದ್ರ ಸರಕಾರಕ್ಕೆ ಈ ಲೈಸನ್ಸ್ ನವೀಕರಿಸಿರುವುದು ತೀವ್ರ ಮುಜುಗರಕ್ಕೆ ಕಾರಣವಾಗಿದೆ.

"ಕೇಂದ್ರ ಗೃಹವ್ಯವಹಾರಗಳ ಸಚಿವಾಲಯ ದ್ವಿವೇದಿ ಹಾಗೂ ಅವರ ಅಧೀನದಲ್ಲಿರುವ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಈ ಬಗ್ಗೆ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದ್ದು, ಇದನ್ನು ನವೀಕರಿಸಿದ ಕ್ರಮದ ಹಿಂದಿನ ದುರುದ್ದೇಶದ ಬಗ್ಗೆ ತನಿಖೆ ನಡೆಸಲಾಗುವುದು. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ-2010ಕ್ಕೆ ವಿರುದ್ಧವಾಗಿ ಐಆರ್‌ಎಫ್ ಲೈಸನ್ಸ್ ನವೀಕರಿಸಿದ ಸಂಬಂಧ, ತನಿಖೆ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗವುದು ಎಂದು ಅಧಿಕೃತ ಮೂಲಗಳು ಹೇಳಿವೆ.

ಐಆರ್‌ಎಫ್‌ನ ಲೈಸನ್ಸ್ ನವೀಕರಣಕ್ಕೆ ಸಂಬಂಧಿಸಿದಂತೆ ಕೇವಲ ಎಫ್‌ಸಿಆರ್‌ಎ ಕಾಯ್ದೆಯ ಉಲ್ಲಂಘನೆ ಮಾತ್ರವಲ್ಲದೇ, ಬಲಾತ್ಕಾರದ ಮತಾಂತರ, ಕೋಮು ದ್ವೇಷ ಹಬ್ಬಿಸುವುದು ಮತ್ತಿತರ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News