ಭಟ್ಕಳ: ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಮಾಂಸ ಎಸೆತ ಪ್ರಕರಣದ ರಹಸ್ಯ ಬಯಲು!

Update: 2016-09-02 15:32 GMT

ಭಟ್ಕಳ, ಸೆ.2: ಕರ್ತವ್ಯಲೋಪ ಎಸಗಿದ ಆರೋಪದೊಂದಿಗೆ ಸೇವೆಯಿಂದ ಅಮಾನತುಗೊಂಡು, ಅಮಾನತು ಆದೇಶ ಪಡೆಯದೆ ಮೇಲಾಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹುದ್ದೆಗೆ ರಾಜಿನಾಮೆ ಸಲ್ಲಿಸಿದ ಭಟ್ಕಳ ನಗರ ಠಾಣಾ ಎಸ್ಸೈ ರೇವತಿ ಅವರು, ಭಟ್ಕಳದಲ್ಲಿ ಮಾಂಸ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಪಿ ಹಾಗೂ ಇಲ್ಲಿನ ಬಿಜೆಪಿ ಮುಖಂಡರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಈ ಕುರಿತು ಅವರು ಗೃಹಸಚಿವರಿಗೆ ಲಿಖಿತ ದೂರನ್ನು ನೀಡಿದ್ದು, ತಮಗೆ ಮೇಲಧಿಕಾರಿಗಳು ಕಿರುಕುಳವನ್ನು ನೀಡುತ್ತಿದ್ದಾರೆ. ಅಲ್ಲದೆ, ಭಟ್ಕಳದ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಮಾಂಸ ಎಸೆತ ಪ್ರಕರಣದಲ್ಲಿ ಈ ಅಧಿಕಾರಿ ಹಾಗೂ ಬಿಜೆಪಿ ಮುಖಂಡರ ಕೈವಾಡವಿದ್ದು, ಇವರು ಭಟ್ಕಳದಲ್ಲಿ ಕೋಮುಗಲಭೆಯನ್ನು ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಭಟ್ಕಳದಲ್ಲಿ ಹೇಗಾದರೂ ಮಾಡಿ ಮುಂದಿನ ಚುನಾವಣೆಯವರೆಗೂ ಪರಿಸ್ಥಿತಿಯನ್ನು ಹದಗೆಡಿಸುವುದರ ಮೂಲಕ ತಮ್ಮ ಪಕ್ಷದ ಗೆಲುವನ್ನು ಖಾತರಿಪಡಿಸಿಕೊಳ್ಳಲು ರಾಜಕೀಯ ಮುಖಂಡರು ಅಮಾಯಕ ಜನರನ್ನು ಬಲಿಪಶುವನ್ನಾಗಿ ಮಾಡುತ್ತಿದ್ದಾರೆ. ಸಂಘಪರಿವಾರದ ಕಾರ್ಯಕರ್ತರೊಂದಿಗೆ ನಂಟನ್ನು ಬೆಸೆದುಕೊಂಡಿರುವ ಇಲ್ಲಿನ ಪೊಲೀಸ್ ಉನ್ನತ ಅಧಿಕಾರಿ ಅವರು ಸೂಚಿಸಿದಂತೆ ಕುಣಿಯುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ಇದೀಗ ಎಸ್ಸೈ ರೇವತಿ ಅವರು ನೀಡಿರುವ ಲಿಖಿತ ದೂರು ಇದಕ್ಕೆ ಪುಷ್ಟಿ ಒದಗಿಸುತ್ತಿದೆ ಎನ್ನಲಾಗಿದೆ.

ಎಸ್ಸೈ ರೇವತಿ ಅವರನ್ನು ಅಮಾನತು ಮಾಡಲು ಹೊರಿಸಿರುವ ಕರ್ತವ್ಯಲೋಪದ ಆರೋಪ ಬರೀ ಒಂದು ನೆಪವಾಗಿದ್ದು, ಸಂಘಪರಿವಾರದೊಂದಿಗೆ ಕೈಜೋಡಿಸಿರುವ ಉನ್ನತ ಅಧಿಕಾರಿಯು ಮಾಂಸ ಎಸೆತ ಪ್ರಕರಣದಲ್ಲಿ ಸತ್ಯವನ್ನು ಬಚ್ಚಿಡಲು ಹಾಗೂ ನೈಜ ಆರೋಪಿಗಳ ಹೆಸರನ್ನು ಬಹಿರಂಗಗೊಳಿಸದಂತೆ ರೇವತಿ ಅವರ ಮೇಲೆ ಉನ್ನತ ಅಧಿಕಾರಿ ಒತ್ತಡ ಹೇರಿದ್ದು, ಅದನ್ನು ಒಪ್ಪದ ರೇವತಿಯವರ ಮೇಲೆ ಕರ್ತವ್ಯಲೋಪದ ಆರೋಪ ಹೊರಿಸಿ ಅಮಾನುತುಗೊಳಿದ್ದಾರೆ ಎನ್ನುವ ಆರೋಪಗಳು ಪೊಲೀಸ್ ಇಲಾಖೆಯ ಮೂಲಗಳಿಂದ ಕೇಳಿಬಂದಿವೆ.

ಸರಕಾರ ರೇವತಿ ಅವರು ಉನ್ನತ ಅಧಿಕಾರಿಗಳ ವಿರುದ್ಧ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕು. ಭಟ್ಕಳದಲ್ಲಿ ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಇಲಾಖೆ ಸೂಕ್ತ ಕ್ರಮ ಜರಗಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News