×
Ad

ಸುಧಾರಣಾ ಅಜೆಂಡಾ ಜಾರಿಗೆ ವಿರೋಧಿಸಿ ಪ್ರತಿಭಟನೆ

Update: 2016-09-02 22:09 IST

 ಚಿಕ್ಕಮಗಳೂರು, ಸೆ.2: ಕೇಂದ್ರ ಸರಕಾರ ನಿರಂತರವಾಗಿ ತನ್ನ ಸುಧಾರಣಾ ಅಜೆಂಡಾವನ್ನು ಜಾರಿಗೆ ತರಲು ಆಗಾಗ್ಗೆ ಪ್ರಯತ್ನಿಸಿದ್ದು ಅದರಲ್ಲಿ ಬ್ಯಾಂಕ್‌ಗಳ ವಿಲೀನ ಮತ್ತು ಖಾಸಗೀಕರಣಕ್ಕೆ ಒತ್ತು ನೀಡುತ್ತದೆ. ಈ ನಿಟ್ಟಿನಲ್ಲಿ ಕಾರ್ಪೋರೇಟ್ ಸಂಸ್ಥೆಗಳಿಗೆ ಪರವಾನಿಗೆ, ಸಣ್ಣ ಬ್ಯಾಂಕ್‌ಗಳನ್ನು ತೆರೆಯಲು ಒಪ್ಪಿಗೆ ನೀಡಲಾಗುತ್ತಿದೆ. ಇದರಿಂದ ಈಗಾಗಲೇ ದುಡಿಯುತ್ತಿರುವ ಸಿಬ್ಬಂದಿ ಅತಂತ್ರರಾಗುವ ಸಾಧ್ಯತೆ ಇದೆ ಎಂದು ಚಿಕ್ಕಮಗಳೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘ ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಪ್ರತಿಭಟನೆಯ ಮೂಲಕ ಕೇಂದ್ರ ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ ಪ್ರತಿರೋಧ ಒಡ್ಡಿದರೂ ಸರಕಾರ ಪ್ರಯತ್ನ ಮುಂದುವರಿಸುತ್ತಿದೆ.ಕಾರ್ಮಿಕರ ಕಾಯ್ದೆಯನ್ನು ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿ ಮಾಲೀಕರ ಪರವಾದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಕಾರ್ಮಿಕರು ಹಾಗೂ ಕಾರ್ಮಿಕ ಸಂಘಗಳ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ, ರೈಲ್ವೆ, ರಕ್ಷಣೆ ಮತ್ತು ಆರ್ಥಿಕ ವಿಭಾಗದಲ್ಲಿ ನಿರ್ಬಂಧವಿಲ್ಲದೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ರೈತರ ಭೂಮಿ ಹಕ್ಕು, ಕೃಷಿ ಕಾರ್ಮಿಕರ ಹಕ್ಕುಗಳಿಗೆ ಚ್ಯುತಿ ತರಲಾಗುತ್ತಿದೆ. ಕನಿಷ್ಠ ಕೂಲಿಯನ್ನು ವಾರ್ಷಿಕ 15000 ರೂ. ಗೆ ಏರಿಸಲು ಕೇಂದ್ರ ಸರಕಾರ ನಿರಾಕರಿಸುತ್ತದೆ.ಬಡವರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ಮೀಸಲಿಡಬೇಕಾದ ಮೊತ್ತಕ್ಕೆ ಕತ್ತರಿ ಹಾಕಲಾಗುತ್ತಿದೆ.

ಬ್ಯಾಂಕ್‌ನ ಕ್ಷೇತ್ರವನ್ನು ಕೂಡ ಇಂತಹ ಕ್ರಮಗಳಿಂದ ಹೊರತು ಪಡಿಸಿಲ್ಲ. ಅತ್ಯಂತ ಕಷ್ಟದ ದಿನಗಳನ್ನು ಎದುರಿಸಬೇಕಾದ ಸಂಕಷ್ಟದಿಂದ ಪಾರಾಗಲು ಸಿಬ್ಬಂದಿ ಮುಷ್ಕರಕ್ಕೆ ಮುಂದಾಗುವುದು ಅನಿವಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಎ.ರಮೇಶ್ ಕುಮಾರ್, ಕಾರ್ಯದರ್ಶಿ ಎಚ್.ಟಿ.ಹಾಲಪ್ಪ ಬ್ಯಾಂಕ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News