ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ 960 ಮನೆಗಳು ಮಂಜೂರು: ಶ್ರೀನಿವಾಸ್
ತರೀಕೆರೆ, ಸೆ.2: ತಾಲೂಕಿನಾದ್ಯಂತ 960 ಮನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹಫಲಾನುಭವಿಗಳಿಗೆ ಡಾ. ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರು ಮಾಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.
ಇತ್ತೀಚೆಗೆ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಗ್ರಾಮ ಪಂಚಾಯತ್ ಅಧ್ಯಕ್ಷರ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಿವೇಶನಗಳನ್ನು ಹೊಂದಿರುವ ಗ್ರಾಪಂಗಳಿಗೆ ಮೊದಲ ಆದ್ಯತೆ ನೀಡಿ ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಮ್ಮತದಿಂದ ಇದ್ದರೆ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಕೆಲವೊಮ್ಮೆ ಅಭಿವೃದ್ಧಿಗಾಗಿ ವೈರಿಗಳೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಒದಗಿಬರುವುದುಂಟು. ಮನುಷ್ಯ ಎಂಬ ಜೀವಿಗೆ ಅಸಾಧ್ಯವಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂದರು.
ಈ ಬಾರಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗದೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಗೊಳ್ಳುವ ಮುನ್ಸೂಚನೆ ದೊರೆತಿದೆ, ಹಾಗಾಗಿ ಮುಂದಿನ ಸಮಸ್ಯೆಗೆ ಈಗಿನಿಂದಲೇ ಸಜ್ಜಾಗಬೇಕಿದೆ ಎಂದು ಹೇಳಿದರು.
ತಾಲೂಕಿನಾದ್ಯಂತ ಶಿಥಿಲಗೊಂಡಿರುವ ಗ್ರಾಪಂ ಕಟ್ಟಡಗಳಿಗೆ ವಿಶೇಷ ಅನುದಾನದಲ್ಲಿ ನಿರ್ಮಾಣ ಮಾಡಲು ಅನುದಾನವನ್ನು ಅಳವಡಿಸುವುದಾಗಿ ಭರವಸೆ ನೀಡಿದರು.
ತಾಲೂಕು ಗ್ರಾಪಂಗಳ ಒಕ್ಕೂಟದ ಅಧ್ಯಕ್ಷ, ಕಾಮನದುರ್ಗ, ಗ್ರಾಪಂನ ದೇವರಾಜ್ ಮಾತನಾಡಿ, ಕೆಲವು ಗ್ರಾಪಂಗಳಲ್ಲಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯತೆಯ ಕೊರತೆಯಿದ್ದು, ಶಾಸಕರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಗ್ರಾಪಂಗಳಿಗೆ ಶಾಸನ ಬದ್ಧ ಅನುದಾನಗಳೊಂದಿಗೆ ಗ್ರಾಪಂ ಅಧ್ಯಕ್ಷರಿಗೆ ಸರಕಾರ ನೀಡುತ್ತಿರುವ ಗೌರವ ಧನ ಹೆಚ್ಚಿಸಲು ಶಾಸಕರು ಸರಕಾರದ ಗಮನ ಸೆಳೆಯಬೇಕೆಂದು ಸಭೆಯಲ್ಲಿ ಸೇರಿದ್ದ ವಿವಿಧ ಗ್ರಾಪಂಗಳ ಅಧ್ಯಕ್ಷರು ಶಾಸಕ ಜಿ. ಎಚ್.ಶ್ರೀನಿವಾಸ್ ಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷೆ ವೀಣಾ ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್ ಮೂರ್ತಿ, ಶಿವಕಿರಣ್ ಮತ್ತಿತರರು ಉಪಸ್ಥಿತರಿದ್ದರು.