×
Ad

ಕೇಂದ್ರದ ವಿರುದ್ಧ ರಸ್ತೆಗಿಳಿದ ಕಾರ್ಮಿಕ ವರ್ಗ

Update: 2016-09-02 22:15 IST

ಕೇಂದ್ರದ ವಿರುದ್ಧ ರಸ್ತೆಗಿಳಿದ ಕಾರ್ಮಿಕ ವರ್ಗ

 ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ

ಮಡಿಕೇರಿ, ಸೆ.2: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ದೇಶವ್ಯಾಪಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಶುಕ್ರವಾರದ ಮುಷ್ಕರಕ್ಕೆ ಕೊಡಗಿನ ಬಹುತೇಕ ಎಲ್ಲ್ಲ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು. ಸಿಪಿಐಎಂ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕಗಳು, ಗ್ರಾಪಂ ನೌಕರರ ಸಂಘ, ಹಮಾಲಿ ಕಾರ್ಮಿಕರ ಸಂಘ, ಬಿಸಿಯೂಟ ನೌಕರರ ಸಂಘ, ವಿಮಾ ನೌಕರರ ಸಂಘ, ಕೆಎಸ್ಸಾರ್ಟಿಸಿ ಸಿಬ್ಬಂದಿ, ತೋಟ ಕಾರ್ಮಿಕರ ಸಂಘ, ಸರಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ, ಸಿಐಟಿಯು, ಎಐಟಿಯುಸಿ ಸೇರಿದಂತೆ ಅನೇಕ ಕಾರ್ಮಿ        

 ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸುವ ಮೂಲಕ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದವು.ಕೇಂದ್ರ ಸರಕಾರದ ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳಿಂದಾಗಿ ಕಾರ್ಮಿಕ ವರ್ಗ ಸಂಕಷ್ಟವನ್ನು ಎದುರಿಸುತ್ತಿದೆಯೆಂದು ಆರೋಪಿಸಿದ ಪ್ರತಿಭಟನಾಕಾರರು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಬಾರದೆಂದು ಒತ್ತಾಯಿಸಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಿಂದ ನಗರದ ಮುಖ್ಯ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಾರ್ಮಿಕ ಸಂಘಟನೆಗಳ ಜಂಟಿ ಜಿಲ್ಲಾ ಸಮಿತಿಯ ಪ್ರಮುಖರಾದ ಪಿ.ಆರ್. ಭರತ್, ಡಾ.ದುರ್ಗಾಪ್ರಸಾದ್, ಅಂಗನವಾಡಿ ನೌಕರರ ಸಂಘದ ಪ್ರಮುಖರಾದ ಟಿ.ಪಿ.ರಮೇಶ್, ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಸೇರಿದಂತೆ ಹಲವು ಪ್ರಮುಖರ ನೇತೃತ್ವದಲ್ಲಿ ಕೆಂಪು ಧ್ವಜಗಳನ್ನು ಹಿಡಿದ ಕಾರ್ಮಿಕ ಸಮೂಹ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ, ಕಾರವಾರದಲ್ಲಿ ನೀರಸ ಪ್ರತಿಕ್ರಿಯೆ

ಕನಿಷ್ಠ ವೇತನ, ಪಿಂಚಣಿ ವ್ಯವಸ್ಥೆ, ರಸ್ತೆ ಸುರಕ್ಷತಾ ಮಸೂದೆ ವಾಪಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿ, ಶುಕ್ರವಾರ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಭಾರತ್ ಬಂದ್‌ಗೆ ಶಿವಮೊಗ್ಗ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಾಗರಿಕರ ದೈನಂದಿನ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. 10 ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಆದರೆ ನಾಗರಿಕರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ. ನಗರಾದ್ಯಂತ ವಾಹನಗಳ ಸಂಚಾರ, ವ್ಯಾಪಾರ-ವಹಿವಾಟು ಎಂದಿನಂತೆಯೇ ಇತ್ತು. ಶಾಲಾ-ಕಾಲೇಜು, ರಾಜ್ಯ - ಕೇಂದ್ರ ಸ್ವಾಮ್ಯದ ಸರಕಾರಿ ಕಚೇರಿಗಳು ಕಾರ್ಯನಿರ್ವಹಣೆ ಮಾಡಿದವು. ಉಳಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳ ವಹಿವಾಟು ಸಂಪೂರ್ಣ ಸ್ತಬ್ಧವಾಗಿತ್ತು. ಬಸ್ ವ್ಯವಸ್ಥೆ: ಪರ ಊರುಗಳಿಗೆ ತೆರಳುವ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆಯೇ ಇತ್ತಾದರೂ ಬಸ್‌ಗಳ ಸಂಖ್ಯೆ ಕಡಿಮೆಯಿತ್ತು. ಬೆಳಗ್ಗೆ ಸರಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ಕೆಲ ಸಮಯ ಬಸ್‌ಗಳ ಸಂಚಾರ ಸ್ಥಗಿತವಾಗಿತ್ತು. ಇದರಿಂದ ನೂರಾರು ಪ್ರಯಾಣಿಕರು ನಿಲ್ದಾಣಗಳಲ್ಲಿ ಬಸ್‌ಗಳಿಗೆ ಕಾದು ಕುಳಿತುಕೊಳ್ಳುವಂತಹ ಸ್ಥಿತಿ ಉಂಟಾಯಿತು.

 ರಜೆಯಿಲ್ಲ: ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿರಲಿಲ್ಲ. ಆದರೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಿತ್ತು. ನಗರ ವ್ಯಾಪ್ತಿಯ ಬಹುತೇಕ ಶಾಲಾ-ಕಾಲೇಜುಗಳು ಎಂದಿನಂತೆಯೇ ತೆರೆದಿದ್ದವು. ಭದ್ರತೆ:

ಮೆರವಣಿಗೆ ಸಾಗುವ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿತ್ತು. ಸರಕಾರದ ವಿರುದ್ಧ ಘೋಷಣೆ

ಕಾರವಾರ: ವಿವಿಧ ಕಾರ್ಮಿಕ ಸಂಘಟನೆಗಳ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿ ಶುಕ್ರವಾರ ದೇಶವ್ಯಾಪಿ ಬಂದ್ ಕರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಪ್ರದೇಶದಲ್ಲಿ ಯಾವುದೇ ಅಂಗಡಿ ಮಳಿಗೆಗಳು ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಕೆಲವು ಕಡೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದರೆ, ರಿಕ್ಷಾ, ಟೆಂಪೊಗಳು ಸಂಚರಿಸಿದವು.ಬಂದ್ ನಿಮಿತ್ತ ಶಾಲಾ-ಕಾಲೇಜುಗಳಿಗೆ ರಜೆ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಚಾರ ಯಥಾಸ್ಥಿತಿಯಲ್ಲಿತ್ತು. ಮಾರುಕಟ್ಟೆಯಲ್ಲಿ ಜನ ಸಾಮಾನ್ಯರ ಸಂಚಾರ ಎಂದಿನಂತೆ ಸಾಮಾನ್ಯವಾಗಿತ್ತು.

 ಸಿಐಟಿಯು, ರಾಜ್ಯ ಬಿಎಸ್ಸೆನ್ನೆಲ್ ಗುತ್ತಿಗೆ ಆಧಾರಿತ ಕಾರ್ಮಿಕರ ಸಂಘ, ಆಶಾ ಕಾರ್ಯಕರ್ತೆಯರು, ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಒಳಗೊಂಡ ವಿವಿಧ ಸಂಘಟನೆಗಳ ಸದಸ್ಯರು ಇಲ್ಲಿನ ಕೋಡಿಭಾಗದಿಂದ ಜಿಲ್ಲಾರಂಗ ಮಂದಿರದ ಮೂಲಕ ಮೆರವಣಿಗೆ ನಡೆಸಿ, ಸುಭಾಸ್ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ದಾವಣಗೆರೆಯಲ್ಲಿ ಮಿಶ್ರಪ್ರತಿಕ್ರಿಯೆ

ದಾವಣಗೆರೆ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಶುಕ್ರವಾರ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ದಾವಣಗೆರೆಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದಲ್ಲಿ ಎಂದಿನಂತೆ ಶಾಲಾ, ಕಾಲೇಜು, ಅಂಗಡಿ ಮುಂಗಟ್ಟುಗಳು, ಹೊಟೇಲ್, ಚಿತ್ರಮಂದಿರಗಳು ಕಾರ್ಯನಿರ್ವಹಿದವು. ಗ್ರಾಮೀಣ ಭಾಗದಿಂದ ಬರುವ ಕೆಲ ಖಾಸಗಿ, ಸಾರಿಗೆ ಬಸ್‌ಗೆ ಕಾರ್ಮಿಕ ಸಂಘಟನೆಗಳು ಅಡ್ಡಿಪಡಿಸಿದ್ದು ಹೊರತುಪಡಿಸಿ ಉಳಿದಂತೆ ಬಸ್ ಸಂಚಾರಕ್ಕೆ ಯಾವುದೇ ಅಡೆತಡೆಯಾಗಲಿಲ್ಲ. ಕೆಲವೆಡೆ, ವಿವಿಧ ಸಂಘಟನೆಗಳ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.

ಬೀದಿಗಿಳಿದ ಕಾರ್ಮಿಕ ಸಂಘಟನೆಗಳು

ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ 10ಕ್ಕೂ ಹೆಚ್ಚು ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದಿಂದ ಕಾರ್ಮಿಕರು ಮೆರವಣಿಗೆ ಮೂಲಕ ಗಾಂಧಿವೃತ್ತ, ಪಿಬಿ ರಸ್ತೆ ಮಾರ್ಗವಾಗಿ ಜಯದೇವ ವೃತ್ತಕ್ಕೆ ಆಗಮಿಸಿದರು. ನಂತರ ಪಾಲಿಕೆ ಬಳಿ ಬಹಿರಂಗ ಸಭೆ ನಡೆಸಿ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. 

 ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗುತ್ತಿಗೆ ಆಧಾರಿತ ಕಾರ್ಮಿಕರ ನಿಯುಕ್ತಿಯನ್ನು ರದ್ದು ಪಡಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಗೊಳಿಸಬೇಕು.

                                                             ಯಮುನಾ ಗಾಂವಕರ,ಸಿಐಟಿಯು ಜಿಲ್ಲಾ ಸಂಚಾಲಕಿ ಕಾರವಾರ

ಕೇಂದ್ರ ಮತ್ತು ರಾಜ್ಯ ಸರಕಾರ ಬಂಡವಾಳಶಾಹಿ, ಕಾರ್ಪೊರೇಟ್ ಕಂಪೆನಿಗಳ ಪರ ನಿಂತು ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ. ಸರಕಾರಗಳು ಕಾರ್ಮಿಕ ವರ್ಗವನ್ನು ವ್ಯವಸ್ಥಿತವಾಗಿ ತುಳಿಯುವ ಹುನ್ನಾರ ನಡೆಸುತ್ತಿವೆ. ಕಾರ್ಮಿಕರನ್ನು ಬೀದಿಗೆ ತಳ್ಳುವ ಕೆಲಸ ಮಾಡಿ, ಈ ಮೂಲಕ ಬಂಡವಾಳಶಾಹಿ ವರ್ಗಕ್ಕೆ ಬೆಂಬಲ ನೀಡುತ್ತಿವೆ.

                                                               ರಾಮಚಂದ್ರಪ್ಪ ಕಾರ್ಮಿಕ ಮುಖಂಡ ದಾವಣಗೆರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News