×
Ad

ಶಾಂತಿ ಸೌಹಾರ್ದ ಕಾಪಾಡಲುಕಟ್ಟುನಿಟ್ಟಿನ ಕ್ರಮ

Update: 2016-09-02 22:23 IST

ಸಾಗರ, ಸೆ.2: ಯಾವುದೇ ಧಾರ್ಮಿಕ ಕಾರ್ಯಕ್ರಮಗಳು, ಹಬ್ಬಹರಿದಿನಗಳಿಗೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಕೆಲವೊಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಹೇಳಿದರು. ಇಲ್ಲಿನ ಭದ್ರಕಾಳಿ ಸಭಾ ಭವನದಲ್ಲಿ ಶುಕ್ರವಾರ ಗೌರಿ ಗಣೇಶ ಹಬ್ಬ ಹಾಗೂ ಬಕ್ರೀದ್ ಪ್ರಯುಕ್ತ ಕರೆಯಲಾಗಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಜನಾಂಗದವರು ಹಬ್ಬದ ಸಂದರ್ಭದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಗಮನ ಹರಿಸಬೇಕು. ಗಣಪತಿ ಹಬ್ಬದ ಸಂದರ್ಭದಲ್ಲಿ ನಡೆಯುವ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಸೌಂಡ್ಸ್ ಹಾಗೂ ರಸ್ತೆಯಲ್ಲಿ ಹರಾಜು ಹಾಕುವ ಪ್ರಕ್ರಿಯೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈಗಾಗಲೇ ಪೆಂಡಾಲ್‌ಗೆ ಮೈಕ್ ಹಾಕಲು ಪರವಾನಿಗೆ ನೀಡಿದ್ದು, ಮೆರವಣಿಗೆಯಲ್ಲಿ ಮೈಕ್ ಅಳವಡಿಕೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು. ಬಂದೋಬಸ್ತುಗೆ ಪೊಲೀಸರು ಬರುವುದು ನಿಮ್ಮ ರಕ್ಷಣೆಗೆ ಹೊರತು, ನಿಮ್ಮ ಮೇಲಿನ ಅನುಮಾನದಿಂದ ಬಂದಿರುವುದಿಲ್ಲ. ಪೊಲೀಸ್ ನಿಯಮಗಳು ಸಾರ್ವಜನಿಕರ ರಕ್ಷಣೆಗಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ನಿಮ್ಮ ಆಚರಣೆಗಳಿಗೆ ತೊಂದರೆ ಕೊಡುವ ಕಿಡಿಗೇಡಿಗಳ ಮೇಲೆ ಕಣ್ಗಾವಲು ಹಾಕಲು ನಾವು ಪ್ರಯತ್ನ ನಡೆಸುತ್ತೇವೆ ಎನ್ನುವುದನ್ನು ಗಣೇಶೋತ್ಸವ ಸಮಿತಿ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ಗೊಂದಲ: ಧ್ವನಿವರ್ಧಕ ಬಳಕೆ ನಿಷೇಧ ಮಾಡಲು ಹೊರಟಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಯಿತು. ನಿವೃತ್ತ ಪ್ರಾಚಾರ್ಯ ಅ.ಪು.ನಾರಾಯಣಪ್ಪ, ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಸದಸ್ಯ ಸಂತೋಷ್ ಆರ್. ಶೇಟ್ ಧ್ವನಿವರ್ಧಕ ಬಳಕೆ ಮೇಲೆ ನಿಷೇಧ ಹೇರಿರುವುದು ಸರಿಯಾದ ಕ್ರಮವಲ್ಲ. ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗಣಪತಿ ಮೆರವಣಿಗೆ ಸಂದರ್ಭದಲ್ಲಿ ದೇವರಿಗೆ ಬಂದ ವಿವಿಧ ವಸ್ತುಗಳನ್ನು ರಾಜಬೀದಿಯಲ್ಲಿ ಹರಾಜು ಹಾಕಲು ನಿಷೇಧ ಹೇರಿರುವ ಕ್ರಮ ಸರಿಯಲ್ಲ ಎಂದು ಸುದರ್ಶನ್, ಮೋಹನ್, ಕುಮಾರ್, ಎಂ.ಡಿ.ಆನಂದ್ ಇನ್ನಿತರರು ಖಂಡಿಸಿ, ಹರಾಜಿಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ನಂತರ ಹಿತಕರ ಜೈನ್, ಸೈಯದ್ ತಾಹೀರ್ ಇನ್ನಿತರರು ಮಾತನಾಡಿದರು. ಸಭೆಯಲ್ಲಿ ಅಡಿಷನಲ್ ಎಸ್ಪಿ ವಿನ್ಸಂಟ್ ಶಾಂತಕುಮಾರ್, ಎಎಸ್ಪಿ ನಿಶಾ ಜೇಮ್ಸ್, ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್, ನಗರಸಭೆ ಅಧ್ಯಕ್ಷ ಆರ್.ಗಣಾಧೀಶ್, ನಗರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಜನಾರ್ದನ್, ಗ್ರಾಮಾಂತರ ಠಾಣೆ ಸರ್ಕಲ್ ಮಾದಪ್ಪ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News