ಮೇಲ್ವರ್ಗದಿಂದ ವೀರಶೆವರ ಶೋಷಣೆ ಹೆಚ್ಚುತಿದೆ: ಚೆನ್ನಮಲ್ಲಶ್ರೀ
ದಾವಣಗೆರೆ, ಸೆ.2: ಲಿಂಗಾಯತ ವೀರಶೈವ ಸಮಾಜದಲ್ಲಿನ ಮೇಲ್ವರ್ಗದ ಜನರು ಸಾಧು ಸಂತರನ್ನು, ಕೆಳಸ್ತರದ ವೀರಶೈವರನ್ನು ನಿರಂತರವಾಗಿ ಶೋಷಣೆ ಮಾಡುತ್ತಲೇ ಬಂದಿದ್ದಾರೆ ಎಂದು ಬೆಂಗಳೂರು ನಿಡುಮಾಮಿಡಿ ಮಹಾಸಂಸ್ಥಾನಮಠ ಮತ್ತು ಮಾನವಧರ್ಮ ಪೀಠದ ವೀರಭದ್ರ ಚೆನ್ನಮಲ್ಲ ಶ್ರೀಗಳು ತಿಳಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ರಂಜಾನ್ ದರ್ಗಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಲಿಂಗಾಯತ ಸಮುದಾಯದಲ್ಲಿ ಗುರು, ವಿರಕ್ತರ, ಬಡ, ಶ್ರೀಮಂತ ಮಠ, ಮೇಲ್‌ಸ್ತರ, ಕೆಳಸ್ತರದ ವೀರಶೈವರ ನಡುವೆ ಸ್ವಾತಂತ್ರ ಪೂರ್ವದಿಂದಲೂ ನಿರಂತರ ಸಂಘರ್ಷ ನಡೆಯುತ್ತಲೇ ಇದೆ. ಲಿಂಗಾಯತ ಸಮಾಜದಲ್ಲಿರುವಷ್ಟು ಸಂಘರ್ಷ ಬೇರಾವ ಸಮಾಜದಲ್ಲೂ ಇಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಈ ಸಮುದಾಯಕ್ಕೆ ಅಸ್ತಿತ್ವವೇ ಇಲ್ಲವಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಲಿಂಗಾಯತ ಸಮುದಾಯಕ್ಕೆ ಬಸವಣ್ಣನ ಹೆಸರು ಬೇಕಾಗಿದೆಯೇ ವಿನಃ ಬಸವಣ್ಣನಾಗಲೀ, ಆತನ ವಿಚಾರಧಾರೆಗಳಾಗಲೀ ಬೇಕಾಗಿಲ್ಲ. ಜಾತಿ, ಪಂಥ, ಹೆಚ್ಚುಗಾರಿಕೆ, ಸ್ವಾರ್ಥ ಸಾಧನೆಗೆ ಬಸವಣ್ಣನವರ ಹೆಸರನ್ನು ಬಳಸಿಕೊಂಡವರೇ ಹೆಚ್ಚು ಎಂದು ಅವರು ಹೇಳಿದರು.
ಶರಣತತ್ವದ ಪಾಲನೆ ಕಠಿಣ:
ಯಾರು ಬೇಕಾದರೂ ಸುಲಭವಾಗಿ ಲಿಂಗಾಯತರಾಗಬಹುದು. ಆದರೆ, ಶರಣರ ತತ್ವ ಅಳವಡಿಕೆ ಅಷ್ಟು ಸರಳವಲ್ಲ. ಬಸವಾದಿ ಶರಣರ ಆಚಾರ, ವಿಚಾರಗಳ ಅಳವಡಿಕೆಗೆ ಎದೆಗಾರಿಕೆ ಇರಬೇಕು. ಬಸವಣ್ಣನ ಆಚಾರಗಳ ಬಗ್ಗೆ ಇನ್ನೂ ಅನೇಕರಲ್ಲಿ ಭಯ, ಗೊಂದಲವಿರುವ ಪರಿಣಾಮ ಶರಣತತ್ವ ಪಾಲನೆಯಾಗುತ್ತಿಲ್ಲ ಎಂದರು.
ಪಾಪಪ್ರಜ್ಞೆಯೇ ಇಲ್ಲ:
ಇಂದು ಜನರಲ್ಲಿ ಸ್ವಾರ್ಥ ದುರಾಸೆ ಮನೆ ಮಾಡಿದ್ದು, ಪಾಪಪ್ರಜ್ಞೆಯಿಂದ ಹೊರಗುಳಿದಿದ್ದಾರೆ. ಪರಿಣಾಮ, ಕೋಟಿ ಕೋಟಿ ಲೂಟಿ, ಸಾರ್ವಜನಿಕರು, ಸರಕಾರಕ್ಕೂ ವಂಚಿಸುತ್ತಿರುವ ಹಣದಾಯಿಗಳಿಗೆ ಪಾಪಪ್ರಜ್ಞೆಯೇ ಕಾಡುತ್ತಿಲ್ಲ. ಇದು ಕೇವಲ ಸಾಮಾನ್ಯ ಜನರಿಗಲ್ಲದೇ ಸ್ವಾಮಿ, ಸನ್ಯಾಸಿಗಳಿಗೂ ಆವರಿಸಿರುವುದು ವಿಷಾದನೀಯ ಸಂಗತಿ ಎಂದರು.
ನನ್ನನ್ನು ನಾಸ್ತಿಕ, ಬ್ರಾಹ್ಮಣ ವಿರೋಧಿ, ದಲಿತ ಸ್ವಾಮಿ, ಲಿಂಗಾಯತ ಧರ್ಮ ವಿರೋಧಿ ಎಂದೆಲ್ಲಾ ಕರೆಯುತ್ತಾರೆ. ಆದರೆ, ಇಂದು ನಾಸ್ತಿಕ, ಆಸ್ತಿಕ ಮನೋಧರ್ಮ ಮಾಯವಾಗಿ ಹುಸಿ, ಆಡಂಬರ, ಬೂಟಾಟಿಕೆಯ ಆಸ್ತಿಕ, ನಾಸ್ತಿಕತೆ ಬೆಳೆದಿದೆ. ನಿಜವಾದ ನಾಸ್ತಿಕ, ಆಸ್ತಿಕರೇ ಗೊಂದಲದಲ್ಲಿದ್ದಾರೆ. ಆದರೆ, ಇಂತಹ ನಿಜವಾದ ಆಸ್ತಿಕ, ನಾಸ್ತಿಕರಿಂದ ಎಂದಿಗೂ ಸಮಾಜಕ್ಕೆ ತೊಂದರೆಯಿಲ್ಲ. ತೊಂದರೆ ಆಗುವುದು ಹುಸಿ, ಬೂಟಾಟಿಕೆ ಆಸ್ತಿಕ, ನಾಸ್ತಿಕರಿಂದ ಮಾತ್ರ ಎಂದು ಹೇಳಿದರು.
ಇಂದಿನ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಒಬ್ಬ ಮುಸ್ಲಿಂ ವ್ಯಕ್ತಿಗೆ ನೀಡಿದ್ದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಶರಣರ ವಿಚಾರಧಾರೆಗಳನ್ನು ಒಪ್ಪಿಕೊಂಡು, ಅಪ್ಪಿಕೊಂಡು ಎಲ್ಲೆಡೆ ಬಸವಣ್ಣನವರ ಆದರ್ಶಗಳನ್ನು ಸಾರಿ ಲಿಂಗಾಯತರ ಮನೆಮಾತಾದ ಏಕೈಕ ವ್ಯಕ್ತಿ ಎಂದರೆ ಅದು ಇಂದಿನ ಪ್ರಶಸ್ತಿ ಪುರಸ್ಕೃತ ರಂಜಾನ್ ದರ್ಗಾ ಅವರು ಎಂದು ಅವರು ಪ್ರಶಂಸಿಸಿದರು. ಇದೇ ಸಂದರ್ಭ ಸಾಹಿತಿ ರಂಜಾನ್ ದರ್ಗಾ ಅವರಿಗೆ ಮಾಗನೂರು ಬಸಪ್ಪ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ.ಸಂಗಮೇಶ್ವರಗೌಡರ್, ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ, ಉಪನ್ಯಾಸಕ ಜಿ.ಎಸ್. ಸುಭಾಶ್ಚಂದ್ರ ಬೋಸ್, ಡಾ. ಲೋಕೇಶ್, ಸುನಂದಮ್ಮ ಮತ್ತಿತರರಿದ್ದರು.