ಇಂಧನ ಬೆಲೆ ಏರಿಕೆ ವಿರೋಧಿಸಿ ತಹಶೀಲ್ದಾರ್‌ಗೆ ಮನವಿ
ಅಂಕೋಲಾ, ಸೆ.2: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕಡಿಮೆ ಹಂತಕ್ಕೆ ತಲುಪಿರುವಾಗ ಭಾರತ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಪದೇ ಪದೇ ಹೆಚ್ಚಿಸುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತಸಂಘ ಮತ್ತು ಸಿಐಟಿಯು ತಾಲೂಕು ಸಮಿತಿ ವಿರೋಧಿಸಿ ಇಂದು ತಹಶೀಲ್ದಾರ್ ವಿ.ಜೆ. ಲಾಂಜೇಕರ್‌ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರಕಾರ ಮಧ್ಯರಾತ್ರಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ರೂ. 3.38 ಮತ್ತು ರೂ. 2.67ರಂತೆ ಏರಿಸಿರುವುದು ಖಂಡನೀಯ. ದೇಶೀಯ ಮತ್ತು ವಿದೇಶಗಳ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರಕಾರ ಈ ರೀತಿ ಜನವಿರೋಧಿ ನೀತಿಗಳನ್ನು ಅನುಸರಿಸುವುದನ್ನು ಬಲವಾಗಿ ಖಂಡಿಸುತ್ತೇವೆ ಎಂದರು.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಮುದಾಯಕ್ಕೆ ಮತ್ತೆ ಬೆಲೆ ಏರಿಕೆಯ ಬರೆಬಿದ್ದಿದೆ. ಕೇಂದ್ರ ಸರಕಾರ ತನ್ನ ಜನವಿರೋಧಿ ನೀತಿಗಳನ್ನು ನಿಲ್ಲಿಸಬೇಕೆಂದು ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಕನಾಟಕ ಪ್ರಾಂತ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ, ತಾಲೂಕಾಧ್ಯಕ್ಷ ಗೌರೀಶ ನಾಯಕ, ಸಿಐಟಿಯು ತಾಲೂಕು ಉಪಾಧ್ಯಕ್ಷ ರಾಜುಗೌಡ, ಪ್ರಮುಖರಾದ ಮಣಿಕಂಠ ನಾಯ್ಕ ಉಪಸ್ಥಿತರಿದ್ದರು.