ಕಾನೂನಿಗೆ ಗೌರವ ನೀಡದೆ ಹಿಂಸೆಯ ಹಾದಿ ಹಿಡಿದಿರುವ ಸಂಘ ಪರಿವಾರ: ಮುಸ್ಲಿಂ ಒಕ್ಕೂಟ ಆರೋಪ
ಮಡಿಕೇರಿ, ಸೆ.2: ಜಿಲ್ಲೆಯಲ್ಲಿ ಸಂಘ ಪರಿವಾರ ಕಾನೂನಿಗೆ ಗೌರವ ನೀಡದೆ ಹಿಂಸೆಯ ಹಾದಿ ತುಳಿಯುವ ಮೂಲಕ ಅಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಕೊಡಗು ಜಿಲ್ಲಾ ಮುಸ್ಲಿಂ ಒಕ್ಕೂಟ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಹಾಗೂ ಎಸ್‌ಡಿಪಿಐ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಅಬ್ದುಲ್ ಮಜೀದ್, ಕೊಡಗನ್ನು ಗುಜರಾತ್ ಮಾಡುವುದಾಗಿ ಸಂಘ ಪರಿವಾರ ನೀಡಿರುವ ಹೇಳಿಕೆ ಖಂಡನೀಯವೆಂದರು. ಆ.14 ರಂದು ಪಂಜಿನ ಮೆರವಣಿಗೆ ಸಂದರ್ಭ ಮಸೀದಿ ಮೇಲೆ ನಡೆದ ಕಲ್ಲು ತೂರಾಟ, ಬಳಿಕ ನಡೆದ ಪ್ರವೀಣ್ ಹತ್ಯೆ ಪ್ರಕರಣ, ದೇಣಿಗೆ ಸಂಗ್ರಹಿಸುತ್ತಿದ್ದ ಮೌಲವಿಯನ್ನು ಇರಿದ ಪ್ರಕರಣ, ಗೋಮಾಂಸದ ಹೆಸರಿನಲ್ಲಿ ಮಡಿಕೇರಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಲಗೇಜ್ ರೂಮ್ ಗುತ್ತಿಗೆದಾರನ ಮೇಲೆ ನಡೆದ ಹಲ್ಲೆ ಪ್ರಕರಣ, ಕುಶಾಲನಗರದ ಅನ್ವರ್‌ಉಲ್-ವುದಾ ವಿದ್ಯಾ ಸಂಸ್ಥೆಯ ಮಕ್ಕಳ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಒಕ್ಕೂಟ ಖಂಡಿಸುವುದಾಗಿ ತಿಳಿಸಿದರು. ಶಾಂತಿ ಸೌಹಾರ್ದಕ್ಕೆ ಹೆಸರಾಗಿರುವ ಕೊಡಗು ಜಿಲ್ಲೆಯನ್ನು ಎಂದಿಗೂ ಗುಜರಾತ್ ಆಗಲು ಬಿಡುವುದಿಲ್ಲವೆಂದ ಅಬ್ದುಲ್ ಮಜೀದ್, ಆಟೊ ಚಾಲಕ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗಿದ್ದರೂ ಬಿಜೆಪಿ ಹಾಗೂ ಸಂಘ ಪರಿವಾರ ಮತ್ತೆ ಪ್ರತಿಭಟನೆ ನಡೆಸುವ ಮೂಲಕ ಅಶಾಂತಿ ಸೃಷ್ಟಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಟಿಪ್ಪು ಜಯಂತಿ ಸಂದರ್ಭ ನಡೆದ ಅಮಾಯಕ ಶಾಹುಲ್ ಹಮೀದ್ ಹತ್ಯೆ ಪ್ರಕರಣ ಹಾಗೂ ಇತ್ತೀಚೆಗೆ ಕುಶಾಲನಗರದಲ್ಲಿ ಮೌಲವಿಗೆ ಇರಿದ ಪ್ರಕರಣ ಜೀವಂತವಾಗಿರುವಾಗಲೇ ಯಾವ ನೈತಿಕತೆಯ ಆಧಾರದಲ್ಲಿ ಸಂಘ ಪರಿವಾರ ಕಾವೇರಿ ನೆಲೆಬೀಡಲ್ಲಿ ರಕ್ತ ಹರಿಸುವುದಿಲ್ಲವೆಂದು ಹೇಳಿಕೆ ನೀಡುತ್ತಿದೆ ಎಂದು ಅಬ್ದುಲ್ ಮಜೀದ್ ಪ್ರಶ್ನಿಸಿದರು.
ಗೋಮಾಂಸದ ವಿಚಾರದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ನಡುವೆ ದ್ವಂದ್ವ ನಿಲುವುಗಳಿದ್ದು, ಕೇಂದ್ರದ ಬಿಜೆಪಿ ಮುಖಂಡರೊಬ್ಬರು ದೇಶದಲ್ಲಿ ಶೇ.50 ರಷ್ಟು ಮಂದಿ ಗೋಮಾಂಸ ಸೇವಿಸುತ್ತಾರೆ, ಸೇವಿಸುವವರು ಸೇವಿಸಲಿ ಎಂದು ಕರೆ ನೀಡಿದ್ದಾರೆ. ಅಲ್ಲದೆ, ಗೋಮಾಂಸ ನಿಷೇಧವಿರುವ ರಾಜ್ಯಗಳಲ್ಲಿ ನಿಷೇಧವನ್ನು ತೆರವುಗೊಳಿಸಬೇಕೆಂದು ಹೇಳಿದ್ದಾರೆ. ಆದರೆ ಸಂಘ ಪರಿವಾರ ಗೋಮಾಂಸದ ವಿಚಾರದಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ಮಾತ್ರವಲ್ಲದೆ, ಉಡುಪಿಯ ಪ್ರವೀಣ್ ಪೂಜಾರಿಯ ಮೇಲೂ ದಾಳಿ ನಡೆಸುವ ಮೂಲಕ ನೈಜ ದೌರ್ಜನ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು. ಇಡೀ ವಿಶ್ವದಲ್ಲಿ ಗೋಮಾಂಸ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಅಲ್ಲದೆ, ಬಿಜೆಪಿ ಶಾಸಕರೇ ಗೋಮಾಂಸ ರಫ್ತಿನ ಮಾಲಕರಾಗಿದ್ದಾರೆ. ದೇಶದಿಂದ 2,82,000 ಮೆಟ್ರಿಕ್ ಟನ್‌ನಷ್ಟು ಗೋಮಾಂಸ ರಫ್ತಾಗುತ್ತಿದ್ದರೂ ಇದನ್ನು ತಡೆಯದೆ ಅಮಾಯಕರ ಮೇಲೆ ಸಂಘ ಪರಿವಾರ ಯಾಕೆ ದಾಳಿ ನಡೆಸುತ್ತಿದೆ ಎಂದು ಅಬ್ದುಲ್ ಮಜೀದ್ ಪ್ರಶ್ನಿಸಿದ್ದಾರೆ.