ಬಂಡೀಪುರ ಕಾರ್ಯಾಗಾರ: ಅರಣ್ಯಾಧಿಕಾರಿಗಳಿಗೆ ಜಿಂಕೆ ಮಾಂಸದೂಟ?
ವಲಯ ಅರಣ್ಯಾಧಿಕಾರಿ ಮೇಲೆ ಸ್ಥಳೀಯರ ಶಂಕೆ
ಗುಂಡ್ಲುಪೇಟೆ, ಸೆ.2: ತಾಲೂಕಿನ ಪ್ರಖ್ಯಾತ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅರಣ್ಯಾಧಿಕಾರಿಗಳ ಕಾರ್ಯಾಗಾರದಲ್ಲಿ ಭಾಗವಹಿ ಸಿರುವ ಅಧಿಕಾರಿಗಳಿಗೆ ಮೋಜು ಮಸ್ತಿ ನೆಪದಲ್ಲಿ ಮದ್ಯ ಪೂರೈಸಿ, ಜಿಂಕೆ ಮಾಂಸದೂಟ ನೀಡಿ ರುವ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ.
ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಜಂಗಲ್ ಲಾಡ್ಜಸ್‌ನಲ್ಲಿ ಕಳೆದ ಐದು ದಿನಗಳಿಂದ ಉನ್ನತ ಅರಣ್ಯಾಧಿಕಾರಿಗಳಿಗೆ ಗಸ್ತು ನಿವರ್ಹಣೆ ಬಗ್ಗೆ ಎರಡನೆ ಹಂತದ ತರಬೇತಿ ಕಾರ್ಯಾಗಾರ ನಡೆಯುತ್ತಿದೆ. ಅಧಿಕಾರಿಗಳ ವಾಸ್ತವ್ಯ: ಬಂಡೀಪುರದ ಜಂಗಲ್ ಲಾಡ್ಜಸ್ ಮತ್ತು ಸ್ವಾಗತ ಕಚೇರಿ ಹಿಂಭಾಗದ ವಸತಿಗೃಹಗಳಲ್ಲಿ ಐಎಫ್‌ಎಸ್ ಅಧಿಕಾರಿಗಳಿಗೆ ವಾಸ್ತವ್ಯ ಏರ್ಪಡಿಸಲಾಗಿತ್ತು. ಇವರಲ್ಲಿ ಕರ್ನಾಟಕದ ಅಧಿಕಾರಿಗಳು ಜಂಗಲ್ ಲಾಡ್ಜಸ್‌ನಲ್ಲಿ ವಾಸ್ತವ್ಯ ಹೂಡಿದ್ದರೆ, ಕೇರಳ ಮತ್ತು ತಮಿಳುನಾಡಿನ ಅರಣ್ಯಾಧಿಕಾರಿಗಳು ಚೀತಾಲ್, ಗಜೇಂದ್ರ, ಮಯೂರ ಮುಂತಾದ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಿದ್ದರು.
ಘಟನೆ: ಐದು ದಿನಗಳಿಂದ ನಡೆಯುತ್ತಿದ್ದ ತರಬೇತಿ ಕಾರ್ಯಾ ಗಾರವು ಶುಕ್ರವಾರ ಮುಕ್ತಾಯವಾಗುತ್ತಿದ್ದ ಪರಿಣಾಮ ಗುರುವಾರ ರಾತ್ರಿಯೇ ಸುಮಾರು 60ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳಿಗೆ ಮದ್ಯ ಪೂರೈಕೆ ಮಾಡಲಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕೊಂಡು ತಂದಿ ರುವ ಮ್ಯಾಕ್‌ಡೊವೆಲ್, ಯುಬಿ ಕಂಪೆನಿಯ ಮದ್ಯದ ಕಂಪೆನಿಗಳ ಲೇಬಲ್‌ವುಳ್ಳ ರಟ್ಟಿನ ಡಬ್ಬಗಳು, ಬಿಯರ್‌ನ ಖಾಲಿ ಬಾಟಲಿಗಳು, ಬಡ್‌ವೈಸರ್ ಮದ್ಯದ ಖಾಲಿ ಬಾಟಲಿಗಳು, ತಂಪು ಪಾನೀಯದ ಖಾಲಿ ಬಾಟಲಿಗಳು, ಕುಡಿಯುವ ನೀರಿನ ಖಾಲಿ ಬಾಟಲ್‌ಗಳು, ಜಿಂಕೆ ಕೊಂಬುಗಳು, ಮತ್ತು ಅಡುಗೆ ತಯಾರಿಸುವ ಸಂದರ್ಭ ತಲೆಗೆ ಬಳಸುವ ನ್ಯಾಪ್‌ಕಿನ್‌ಗಳು ಚೀತಾಲ್ ವಸತಿಗೃಹದ ಅಡುಗೆ ಕೋಣೆಯ ಹಿಂಭಾಗದಲ್ಲಿ ಕಂಡು ಬಂದಿವೆ. ಅಂದರೆ ಗುರುವಾರ ರಾತ್ರಿ ಪಾರ್ಟಿ ನಡೆದ ನಂತರ ಜಿಂಕೆಯ ಮಾಂಸದೂಟದ ಭೋಜನ ಸ್ವೀಕರಿಸಿದ ಅಧಿಕಾರಿಗಳು ಅಲ್ಲಿಂದ ತೆರಳಿದರು ಎಂದು ಹೆಸರು ಹೇಳಲಿಚ್ಚಿಸದ ಅರಣ್ಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆಯೂ ನಡೆದಿತ್ತು: ಕಾಂತರಾಜು ಅವರು ಇಲ್ಲಿ ಹುಲಿ ಯೋಜನೆ ನಿರ್ದೇಶಕರಾಗಿದ್ದ ಸಂದರ್ಭ ಮೋಜು ಮಸ್ತಿ ನಡೆಯು ತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬಿ.ಬಿ.ಮಲ್ಲೇಶ್ ಸಿಎಫ್‌ಒ ಆದ ನಂತರ ಇಂತಹ ಅಕ್ರಮ ಚಟುವ ಟಿಕೆಗಳಿಗೆ ಕೆಲ ಮಟ್ಟಿಗೆ ಕಡಿವಾಣ ಹಾಕಿದ್ದರು. ಆದರೆ, ಸ್ಥಳೀಯರೇ ಆದ ಅರಣ್ಯಾಧಿಕಾರಿಯೊಬ್ಬರು ಇಲ್ಲಿ ವಲಯಾರಣ್ಯಾಧಿಕಾರಿಯಾದ ನಂತರ ಇಂತಹ ಘಟನೆಗಳು ಹೆಚ್ಚುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಾನು ಇಲ್ಲಿಗೆ ತಿಂಗಳಿಗೊಮ್ಮೆ ಭೇಟಿ ನೀಡುತ್ತೇನೆ. ಈಚೆಗೆ ಬಂಡೀಪುರದ ಸುತ್ತಮುತ್ತ ಮದ್ಯದ ಖಾಲಿ ಬಾಟಲಿಗಳು ಕಾಣ ಸಿಗುತ್ತವೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ವನ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲ ನಾಶವಾಗುವುದು ನಿಶ್ಚಿತ.
ಪ್ರಮೋದ್, ಪ್ರವಾಸಿಗ ಮಂಡ್ಯ
ಕಳೆದ ಮೂರು ದಿನಗಳಿಂದ ಸ್ವಾಗತ ಕಚೇರಿ ಹಿಂಭಾಗ ಐಎಫ್‌ಎಸ್ ಅರಣ್ಯಾಧಿಕಾರಿಗಳು ವಾಸ್ತವ್ಯ ಹೂಡಿದ್ದು ನಿಜ. ಅವರ ದೇಖರೇಖಿಯನ್ನು ನಾನು ಗಮನಿಸುತ್ತಿದ್ದೆ. ಚೀತಾಲ್ ವಸತಿಗೃಹದ ಹಿಂಭಾಗ ಬಿಯರ್ ಬಾಟಲಿ, ಜಿಂಕೆ ಕೊಂಬು ಇರುವುದು ನನಗೆ ಗೊತ್ತಿಲ್ಲ.
ಗೋವಿಂದರಾಜು, ವಲಯಾರಣ್ಯಾಧಿಕಾರಿ, ಬಂಡೀಪುರ ಮತ್ತು ಜಿ.ಎಸ್.ಬೆಟ್ಟ ವಲಯ
ಘಟನೆ ಬಗ್ಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ರಂಗರಾವ್, ಎಪಿಸಿಸಿಎಫ್
ಇಂತಹ ಅಕ್ರಮಕ್ಕೆ ಕಡಿವಾಣ ಹೇಗೆ?
ಇಂತಹ ಅಕ್ರಮ ಚಟುವಟಿಕೆಗಳನ್ನು ಅಧಿಕಾರಿಗಳೇ ನಡೆಸಿದರೆ, ಕಡಿವಾಣ ಹಾಕುವವರಾದರೂ ಯಾರು? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಸ್ಥಳೀಯ ಹಿನ್ನೆಲೆಯ ಅಧಿಕಾರಿಗಳಿಗೆ ಈ ಬಗ್ಗೆ ಎಲ್ಲಾ ತಿಳಿದಿದ್ದರೂ, ಅವರೇ ಈ ಕಾರ್ಯಕ್ಕೆ ಮುಂದಾಗಿರುವುದು ಅರಣ್ಯ ಇಲಾಖೆ ಮತ್ತು ಪರಿಸರ ಪ್ರಿಯರಲ್ಲಿ ಅಸಹ್ಯ ಮೂಡಿಸಿದೆ. ಈ ಬಗ್ಗೆ ಅರಣ್ಯ ಸಂರಕ್ಷಣಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲಿ ಎಂದು ಪರಿಸರ ಪ್ರಿಯರು ಮತ್ತು ಸಾರ್ವಜನಿಕರಾದ ಮಹೇಶ್, ಶಿವಕುಮಾರ್, ಮಂಜುನಾಥ್ ಆಗ್ರಹಿಸಿದ್ದಾರೆ.