×
Ad

ಕೇಂದ್ರ ಸರಕಾರದ ವಿರುದ್ಧ ಬೃಹತ್ ರಾ್ಯಲಿ

Update: 2016-09-02 23:39 IST

ಬೆಂಗಳೂರು, ಸೆ. 2: ಕೇಂದ್ರ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ರದ್ದು, 18 ಸಾವಿರ ರೂ.ಕನಿಷ್ಠ ವೇತನ ನಿಗದಿ, ಬೆಲೆ ಏರಿಕೆ ತಡೆಗಟ್ಟುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ರ್ಯಾಲಿ ನಡೆಸಲಾಯಿತು.

ಶುಕ್ರವಾರ ಇಲ್ಲಿನ ಪುರಭವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸಾವಿರಾರು ಕಾರ್ಯಕರ್ತರು ಕೆಂಪು ಟೀಶರ್ಟ್ ಧರಿಸಿ, ಧ್ವಜಗಳನ್ನು ಹಿಡಿದು ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಘೋಷಣೆ ಕೂಗುತ್ತಲೇ ಸ್ವಾತಂತ್ರ ಉದ್ಯಾನದ ವರೆಗೂ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಹೋರಾಟಗಾರರಿಂದ ತುಂಬಿದ ರಸ್ತೆಗಳು:  ಪೀಣ್ಯ, ನೆಲಮಂಗಲ ಸೇರಿದಂತೆ ನಾನಾ ಭಾಗಗಳಿಂದ ಸಾವಿರಾರು ಕಾರ್ಯಕರ್ತರು ಬೈಕ್, ಟೆಂಪೋ, ಕಾರುಗಳಲ್ಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪುರಭವನದತ್ತ ಒಂದುಗೂಡಿ, ಸ್ವಾತಂತ್ರ ಉದ್ಯಾನವನದತ್ತ ಸಾಗಿದರು. ಪ್ರತಿಭಟನಾ ರ್ಯಾಲಿ ಪುರಭವನದಿಂದ ಮೈಸೂರು ಬ್ಯಾಂಕ್ ಹತ್ತಿರ ಬರುತ್ತಿದ್ದಂತೆ ಎಸ್‌ಎಫ್‌ಐ, ಎಐಡಿಎಸ್‌ಒ, ಎಐಎಸ್‌ಎಫ್, ಜನವಾದಿ ಮಹಿಳಾ ಸಂಘಟನೆಗಳು ಜೊತೆಗೂಡಿದವು. ಸುಮಾರು ಎರಡು ಕಿಮೀವರೆಗೂ ಕೆಂಪು ಟೀಶರ್ಟ್‌ನ ಹೋರಾಟಗಾರರು ರಸ್ತೆಗಳಲ್ಲಿ ಆವರಿಸಿದ್ದರು.

ಧರಣಿಯಲ್ಲಿ ಪ್ರಮುಖ ಸಂಘಟನೆಗಳಾದ ಐಎನ್‌ಟಿಯುಸಿ, ಎಐಟಿಯುಸಿ, ಟಿಐಟಿಯು, ಸಿಐಟಿಯು, ಎಐಯುಟಿಯುಟಿ, ಎಐಸಿಸಿ ಟಿಯು, ಎಚ್‌ಎಂಎಸ್, ಟಿಯುಸಿಸಿ, ಎಚ್‌ಎಂಕೆಸಿ, ಬ್ಯಾಂಕ್, ವಿಮೆ, ಬಿಎಸ್ಸೆನ್ನೆಲ್, ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ಸಂಘಟನೆ ಗಳು ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಕಾರ್ಮಿಕರು ಪಾಲ್ಗೊಂಡಿದ್ದವು.


ನೌಕರರಿಲ್ಲದೆ ಬಿಕೋ ಎನು್ನತ್ತಿದ್ದ ವಿಧಾನಸೌಧ
ಬೆಂಗಳೂರು, ಸೆ.2: ಕೇಂದ್ರದ ಕಾರ್ಮಿಕ ವಿರೋಧಿ ‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ’ ರದ್ದುಗೊಳಿಸಲು ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದರಿಂದ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ ಸೇರಿದಂತೆ ಬಹುತೇಕ ಸರಕಾರಿ ಕಚೇರಿಗಳು ಸಿಬ್ಬಂದಿ ಹಾಜರಾತಿ ಕೊರತೆಯಿಂದ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶುಕ್ರವಾರ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೋರಿಕ್ಷಾ, ಟ್ಯಾಕ್ಸಿ, ಕ್ಯಾಬ್‌ಗಳು, ಖಾಸಗಿ ಬಸ್ಸುಗಳ ಮಾಲಕರು-ಚಾಲಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಸಾರಿಗೆ ವ್ಯವಸ್ಥೆಯಿಲ್ಲದ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳಿಗೆ ಸಿಬ್ಬಂದಿ ಹಾಜರಾಗಲಿಲ್ಲ.
 ಹೈಕೋರ್ಟ್, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಗೋಪುರ, ಎಜಿ ಕಚೇರಿ, ಖನಿಜ ಭವನ ಸೇರಿದಂತೆ ಬಹುತೇಕ ಸರಕಾರಿ ಕಚೇರಿಗ ಳಲ್ಲಿ ಸಿಬ್ಬಂದಿ ಇಲ್ಲದೆ ಬಿಕೋ ಎನ್ನುತ್ತಿದ್ದವು. ಮುಷ್ಕರದ ಬಿಸಿ ಸರಕಾರಿ ಕಚೇರಿಗಳಿಗೂ ಬಲವಾಗಿಯೇ ತಟ್ಟಿದೆ ಎಂದು ಹೇಳಬಹುದು.
ಕಾರ್ಮಿಕರ ಮುಷ್ಕರದ ಮುನ್ಸೂಚನೆ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್ ಸೇರಿದಂತೆ ಸರಕಾರಿ ಕಚೇರಿಗಳಿಗೆ ಅರ್ಜಿ ಹಿಡಿದುಕೊಂಡು ಬರುವ ಸಾರ್ವಜನಿಕರಿಲ್ಲದೆ ಶಕ್ತಿ ಕೇಂದ್ರದ ಮೊಗಸಾಲೆಗಳು ಬಣಗುಟ್ಟುತ್ತಿದ್ದ ದೃಶ್ಯ ಕಂಡುಬಂತು.
  ಕೆಲ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಕೆಳಹಂತದ ಬೆರಳೆಣಿಕೆಯಷ್ಟು ಸಿಬ್ಬಂದಿ ಮತ್ತು ನೌಕರರ ಹಾಜರಾತಿಯಿದ್ದರೂ ಅವರಲ್ಲಿ ಪ್ರತಿನಿತ್ಯದಂತೆ ಯಾವುದೇ ಗಡಿಬಿಡಿ ಇಲ್ಲದೆ ನಿರಾಳ ಭಾವ ಮನೆಮಾ ಡಿತ್ತು. ಒಂದು ರೀತಿಯಲ್ಲಿ ರಜಾ ದಿನದಂತೆ ಕಚೇರಿಗಳಿದ್ದದ್ದು ಗೋಚರಿಸುತ್ತಿದ್ದವು. ಕೇವಲ ನಮ್ಮ ಮೆಟ್ರೋ ರೈಲು ಹೊರತುಪಡಿಸಿ ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೋರಿಕ್ಷಾ, ಕ್ಯಾಬ್, ಖಾಸಗಿ ಬಸ್ಸುಗಳನ್ನೇ ಆಶ್ರಯಿಸಿದ್ದ ನೌಕರರು ಕಚೇರಿಯತ್ತ ಮುಖ ಮಾಡಲಿಲ್ಲ. ಶುಕ್ರವಾರ ಮುಷ್ಕರ, ಶನಿವಾರ ಒಂದು ದಿನ ರಜೆ ಹಾಕಿದರೆ ರವಿವಾರ ಮತ್ತು ಸೋಮವಾರ ಗೌರಿ-ಗಣೇಶನ ಹಬ್ಬದ ರಜೆಯಿದ್ದ ಕಾರಣ ಬಹುತೇಕ ಸಿಬ್ಬಂದಿ ಮೊದಲೆ ರಜೆ ಹಾಕಿಕೊಂಡಿದ್ದರು. ಹೀಗಾಗಿ ಸೆ.6ರ ಮಂಗಳವಾರವೆ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಳ್ಳಲಿವೆ.
ಸಿಎಂ, ಸಚಿವರ ಸುಳಿವಿಲ್ಲ: 
ನಿಗಮ ಮಂಡಳಿ ಅಧ್ಯಕ್ಷ- ಉಪಾ ಧ್ಯಕ್ಷರ ಆಯ್ಕೆ ಸಂಬಂಧ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಸಚಿವರು, ಶಾಸಕರು ಸೇರಿ ಅವರ ಹಿಂಬಾಲಕರೆಲ್ಲ ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿದ್ದರಿಂದ ಶಕ್ತಿ ಕೇಂದ್ರದತ್ತ ಯಾರೊಬ್ಬರೂ ಧಾವಿಸಲಿಲ್ಲ.

ಸಾರಿಗೆ ಇಲಾಖೆಗೆ 18ಕೋಟಿ ರೂ. ನಷ್ಟ
ಬೆಂಗಳೂರು, ಸೆ.2: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಹಮ್ಮಿ ಕೊಂಡಿದ್ದ ಮುಷ್ಕರದಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ಸುಮಾರು 18ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ.
ರಾಜ್ಯ ಸಾರಿಗೆ ಸಂಸ್ಥೆಯಲ್ಲಿ 20ಸಾವಿರ ಬಸ್‌ಗಳಿದ್ದು, ಚಾಲಕರು ಮತ್ತು ನಿರ್ವಾಹಕರುಗಳ ಗೈರು ಹಾಜರಿಯಿಂದಾಗಿ ಕೇವಲ 400ಬಸ್‌ಗಳನ್ನು ಮಾತ್ರ ರಸ್ತೆಗಿಳಿಸಲಾಗಿತ್ತು. ಇದ ರಿಂದಾಗಿ ಸಾರಿಗೆ ಸಂಸ್ಥೆಗೆ ಕೋಟ್ಯಂತರ ರೂ.ನಷ್ಟವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕೆಲಸಕ್ಕೆ ಗೈರು ಹಾಜರಾದ ಸಾರಿಗೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು ಚಿಂತಿಸಲಾಗುವುದು. ಮುಷ್ಕರದಿಂದ ಬಸ್‌ಗಳು ರಸ್ತೆಗಿಳಿಯದ ಕಾರಣ ಡೀಸೆಲ್ ಉಳಿತಾಯವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News