ಎಸ್ಸಿ-ಎಸ್ಟಿ ನರ್ಸಿಂಗ್ ವಿದ್ಯಾರ್ಥಿಗಳಿಗೆ 50 ಸಾವಿರ ರೂ. ಅನುದಾನ
ಬೆಂಗಳೂರು, ಸೆ.2: ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಎಸ್ಸಿ-ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ 50ಸಾವಿರ ರೂ.ಅನುದಾನ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಐಎಎಸ್, ಕೆಎಎಸ್ ತರಬೇತಿ ಪಡೆಯುತ್ತಿರುವ ಎಸ್ಸಿ-ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಎಲ್ಲ ಸರಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಬಿಎಸ್ಸಿ ನರ್ಸಿಂಗ್, ಡಿಪ್ಲೊಮಾ ನರ್ಸಿಂಗ್ ಮಾಡುತ್ತಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಟ್ಟಿ ಬಂದ ಕೂಡಲೇ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಸಚಿವ ಆಂಜನೇಯ ತಿಳಿಸಿದರು.
50 ಸಾವಿರ ರೂ. ಅನುದಾನ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ ಕಟ್ಟಲು, ಪ್ರವಾಸ ಹಾಗೂ ಹಾಸ್ಟೆಲ್ ಸೌಲಭ್ಯ ವೆಚ್ಚ ಭರಿಸಲು ಇದರಿಂದ ಅನುಕೂಲವಾಗಲಿದೆ. ಇದೇ ಮೊದಲ ಬಾರಿಗೆ ನರ್ಸಿಂಗ್ ಮಾಡುತ್ತಿರುವವರಿಗೂ ಈ ಸೌಲಭ್ಯ ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಮೊರಾರ್ಜಿ ದೇಸಾಯಿ ಹಾಗೂ ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಅದರ ಜೊತೆಗೆ 145 ವಸತಿ ಶಾಲೆಗಳನ್ನು ಹೆಚ್ಚುವರಿಯಾಗಿ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಶೀಘ್ರವೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.