×
Ad

ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಲೋಪ

Update: 2016-09-03 21:44 IST

ಸಾಗರ, ಸೆ.3: ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಉಂಟಾಗುತ್ತಿರುವ ಲೋಪವನ್ನು ಸರಿಪಡಿಸಿ, ಅದನ್ನು ಶಿಕ್ಷಕರು ಉಪಯೋಗಿಸಿಕೊಳ್ಳಲು ಅನುಕೂಲವಾಗುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಶನಿವಾರ ಪ್ರಾಥಮಿಕ ಶಾಲಾ ಭಡ್ತಿ ಮುಖ್ಯ ಶಿಕ್ಷಕರ ಸಂಘದ ಸ್ಥಳೀಯ ಶಾಖೆ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ ಮಾತನಾಡಿ, ಸರಕಾರ ಜ್ಯೋತಿ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ತಂದಿದ್ದರೂ ಅದು ಶಿಕ್ಷಕ ಸಮೂಹ ಸಮರ್ಪಕವಾಗಿ ಉಪಯೋಗಿಸಿಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಕರ ಮಾಹಿತಿಯನ್ನು ಎಚ್‌ಆರ್‌ಎಂಎಸ್‌ಗೆ ಜೋಡಿಸುವಲ್ಲಿ ಆಗಿರುವ ಲೋಪದಿಂದ ಯೋಜನೆ ಫಲಾನುಭವಿಗಳಾಗಬೇಕಾಗಿದ್ದ ಶಿಕ್ಷಕರು ಆರೋಗ್ಯ ಖರ್ಚಿಗೆ ಸ್ವಂತ ಹಣವನ್ನು ಉಪಯೋಗಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಯೋಜನೆಯು 7 ಮಾರಣಾಂತಿಕ ಕಾಯಿಲೆಗಳಿಗೆ ಅನ್ವಯ ಆಗುತ್ತದೆ. ಕರ್ತವ್ಯನಿರತ ಕೆಲವು ಶಿಕ್ಷಕರು ಅಪಘಾತ, ಕಾಯಿಲೆ ಇನ್ನಿತರೆ ಸಂದರ್ಭದಲ್ಲಿ ಯೋಜನೆ ವ್ಯಾಪ್ತಿಗೆ ಬರುವ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋದರೆ, ಮಾಹಿತಿ ಕೊರತೆಯಿಂದ ಸೌಲಭ್ಯ ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ನೋಂದಾವಣೆಯಲ್ಲಿ ಆಗುತ್ತಿರುವ ಲೋಪವನ್ನು ತಕ್ಷಣ ಸರಿಪಡಿಸಿ, ಶಿಕ್ಷಕರಿಗೆ ತುರ್ತು ಸಂದರ್ಭದಲ್ಲಿ ಯೋಜನೆ ಸದುಪಯೋಗಪಡಿಸಿಕೊಳ್ಳಲು ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಭಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ಸರಕಾರ ನೌಕರರ ಹಿತದೃಷ್ಟಿಯಿಂದ ಜಾರಿಗೆ ತಂದ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಗತ್ಯಕ್ರಮ ಕೈಗೊಳ್ಳಬೇಕು. ರೋಗಿಗಳು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಸರಿಯಾದ ಮಾಹಿತಿ ಹಾಗೂ ದಾಖಲೆಗಳು ಇಲ್ಲದೆ ಇರುವ ಬಗ್ಗೆ ಆಸ್ಪತ್ರೆ ಮುಖ್ಯಸ್ಥರು ಆಕ್ಷೇಪಿಸುತ್ತಿದ್ದಾರೆ. ಶಿಕ್ಷಕರು ಅತ್ಯಂತ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಇಂತಹ ಸೌಲಭ್ಯವಿದ್ದೂ ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಭಡ್ತಿ ಮುಖ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ಕೆ.ಚನ್ನಪ್ಪ, ಪ್ರಧಾನ ಕಾರ್ಯದರ್ಶಿ ಸಿ.ನಾಗರಾಜ, ಸಹ ಕಾರ್ಯದರ್ಶಿ ಪ್ರಭು ಇ.ಎನ್., ರಮೇಶ್ ನಾರಾಯಣ, ಬೂದ್ಯಪ್ಪ ಕೆ.ಎಚ್., ಚಂದ್ರಪ್ಪ, ಮನೋಹರ, ಕೃಷ್ಣಪ್ಪ, ಡಿ.ಕೆ.ಮೋಳೆ ಮತ್ತಿತರರು ಹಾಜರಿದ್ದರು.

ನಾಳೆ ಮಾಂಸ ಮಾರಾಟ ನಿಷೇಧ ಚಿಕ್ಕಮಗಳೂರು, ಸೆ.3: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಸೆ.5ರಂದು ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ.

  ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆಗಳು, ಮಾಂಸ ಮಾರಾಟ ಅಂಗಡಿಗಳನ್ನು ಹಾಗೂ ಮಾಂಸಾಹಾರಿ ಹೊಟೇಲ್‌ಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ನಗರಸಭೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News