ನೆರೆ ರಾಜ್ಯಗಳಲ್ಲಿ ರೋಡ್ ಶೋ ಆಯೋಜನೆ: ಸಚಿವ ದೇಶಪಾಂಡೆ
ಕಾರವಾರ, ಸೆ.3: ಕಾರವಾರದಲ್ಲಿ ನ.12 ಮತ್ತು 13ರಂದು ನಡೆಯಲಿರುವ ಉದ್ಯೋಗ ಮೇಳಕ್ಕೆ ಹೆಚ್ಚಿನ ಕಂಪೆನಿಗಳನ್ನು ಆಹ್ವಾನಿಸಲು ಬೆಂಗಳೂರು, ಪುಣೆ, ಗೋವಾಗಳಲ್ಲಿ ರೋಡ್ ಶೋ ಹಾಗೂ ಕಂಪೆನಿಗಳೊಂದಿಗೆ ಸಭೆ ಆಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರವಾರ ಉದ್ಯೋಗ ಮೇಳದ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ಈಗಾಗಲೇ ಹಲವು ಪ್ರಮುಖ ಕಂಪೆನಿಗಳನ್ನು ಸಂಪರ್ಕಿಸಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಸುಮಾರು 250 ಕಂಪೆನಿಗಳು ಭಾಗವಹಿಸುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ 15 ಕಂಪೆನಿಗಳು ಕಾರವಾರ ಉದ್ಯೋಗ ಮೇಳ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿದ್ದು, 1,025ಅಭ್ಯರ್ಥಿಗಳು ಹೆಸರು ನೋಂದಾವಣೆ ಮಾಡಿದ್ದಾರೆ. ಯುವಜನತೆಗೆ ಉದ್ಯೋಗ ಸೃಷ್ಟಿಗೆ ವೇದಿಕೆ ಕಲ್ಪಿಸುವುದು ಉದ್ಯೋಗ ಮೇಳದ ಗುರಿಯಾಗಿದೆ ಹೊರತು ಹೆಚ್ಚಿನ ಸಂಖ್ಯೆ ಯಲ್ಲಿ ಜನರನ್ನು ಸೇರಿಸುವುದು ಅಲ್ಲ. ಈ ನಿಟ್ಟಿನಲ್ಲಿ ಉದ್ಯೋಗ ನೀಡಬಲ್ಲ ಹೆಚ್ಚಿನ ಕಂಪೆನಿಗಳನ್ನು ಆಹ್ವಾನಿಸುವುದು ನಮ್ಮ ಗುರಿಯಾಗಿರಬೇಕು ಎಂದು ಅವರು ಸ್ಪಷ್ಟಪಡಿಸಿದರು. ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜನೆಗೆ ನಿರ್ಧರಿಸಲಾಗಿದೆ. ಪರ್ಯಾಯ ಸ್ಥಳಗಳನ್ನು ಸಹ ಗುರುತಿಸಬೇಕು. ಮೆಡಿಕಲ್ ಕಾಲೇಜು ಹಾಗೂ ಬಾಲಕರ ಹಾಸ್ಟೆಲ್ ಮಾತ್ರ ಬಳಸಿಕೊಳ್ಳಬೇಕು. ಇನ್ನುಳಿದಂತೆ ಡಿಪ್ಲೊಮಾ ಕಾಲೇಜು, ಮಾಲಾದೇವಿ ಕ್ರೀಡಾಂಗಣ ಮುಂತಾದ ಸ್ಥಳಗಳನ್ನು ಸಹ ಪರಿಶೀಲನೆ ನಡೆಸಬೇಕು. ಬಹುಮಾಧ್ಯಮ, ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲ್ಲ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಬೇಕು ಎಂದರು. ಅಭ್ಯರ್ಥಿಗಳ ಹಾಗೂ ಕಂಪೆನಿಗಳ ನೋಂದಣಿಗೆ ಅಂತಿಮ ದಿನಾಂಕವನ್ನು ನಿಗದಿಪಡಿಸಬೇಕು. ಇದನ್ನು ವೆಬ್‌ಸೈಟ್‌ನಲ್ಲಿ ಸಹ ಪ್ರಕಟಿಸಬೇಕು. ನವೆಂಬರ್ ಪ್ರಥಮ ವಾರದಲ್ಲಿ ನೋಂದಣಿ ಮಾಡಿರುವ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಬೇಕು. ನೋಂದಣಿ ಮಾಡಿರುವ ಅಭ್ಯರ್ಥಿಗಳ ಬಯೋಡಾಟಾ ಪರಿಶೀಲನೆ ನಡೆಸಿ ಉದ್ಯೋಗ ನೀಡಬಹುದಾದ ಕಂಪೆನಿಗಳಿಗೆ ಉದ್ಯೋಗ ಮೇಳಕ್ಕಿಂತ ಪೂರ್ವದಲ್ಲೇ ಕಳುಹಿಸಬೇಕು. ಇದರಿಂದ ಪ್ರಾರಂಭಿಕ ಪರಿಶೀಲನೆ ಪೂರ್ಣಗೊಳಿಸಲು ಕಂಪೆನಿಗಳಿಗೆ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಅಂಗವಿಕಲರಿಗೆ ಸೌಲಭ್ಯ ವಿತರಣೆ
ಜಿಲ್ಲೆಯಲ್ಲಿ ವಿವಿಧ ಅಂಗವಿಕಲತೆಯನ್ನು ಅನುಭವಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ವಿವಿಧ ಸಾಧನ ಸಲಕರಣೆಗಳನ್ನು ನೀಡಲು ಡಿಸೆಂಬರ್ ತಿಂಗಳಲ್ಲಿ ಕಾರವಾರದಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಇದುವರೆಗೆ ಸಹಾಯ ಸೌಲಭ್ಯ ಪಡೆಯದೆ ಬಾಕಿ ಉಳಿದಿರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಸೌಲಭ್ಯಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕ ಮಂಕಾಳು ವೈದ್ಯ, ಸತೀಶ್ ಸೈಲ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಉದ್ಯೋಗ ಮೇಳ ನೋಡಲ್ ಅಧಿಕಾರಿ ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.