6 ರಾಜ್ಯ ಹೆದ್ದಾರಿಗಳು ಮೇಲ್ದರ್ಜೆಗೆ: ನಿತಿನ್ ಗಡ್ಕರಿ

Update: 2016-09-03 18:18 GMT

ಕೊಪ್ಪಳ, ಸೆ.3: ಕರ್ನಾಟಕದ 6 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ನೌಕಾಯಾನ ಸಚಿವ ನಿತಿನ್ ಗಡ್ಕರಿ ಅವರು ಕೊಪ್ಪಳದಲ್ಲಿ ಘೋಷಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-4, 13, 18, 63ರಲ್ಲಿ ಕೈಗೆತ್ತಿಕೊಂಡಿರುವ ಚತುಷ್ಪಥ ರಸ್ತೆ ಕಾಮಗಾರಿ, ಮೇಲ್ಸೇತುವೆ ಸೇರಿದಂತೆ ಬೈಪಾಸ್ ನಿರ್ಮಾಣ ಕಾಮಗಾರಿಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ದೇಶದಲ್ಲಿ ಹಲವಾರು ವರ್ಷಗಳಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ವಾಹನಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಆದರೆ, ಅದಕ್ಕೆ ಪೂರಕವಾಗಿ ರಸ್ತೆಗಳ ವಿಸ್ತರಣೆ ಹಾಗೂ ಸಂಪರ್ಕ ಜಾಲ ವಿಸ್ತರಣೆ ಯಾಗಿಲ್ಲ. ಇದರಿಂದಾಗಿ ದೇಶದಲ್ಲಿ ಪ್ರತೀ ವರ್ಷ 5ಲಕ್ಷ ರಸ್ತೆ ಅಪಘಾತಗಳು ನಡೆಯುತ್ತಿದ್ದು, ಸುಮಾರು 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ದೇಶದ ರಸ್ತೆಗಳು ಅಭಿವೃದ್ಧಿಗೊಳಿಸಿ ಅಪಘಾತಗಳ ಸಂಖ್ಯೆಯನ್ನು ಇಳಿಸಬೇಕಿದೆ ಎಂದು ಸಚಿವರು ಹೇಳಿದರು.

6 ಹೊಸ ರಾಷ್ಟ್ರೀಯ ಹೆದ್ದಾರಿಗಳ ಘೋಷಣೆ: 6 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆ ಗೇರಿಸಲಾಗುತ್ತಿದೆ.  ಮಾರ್ಗದ 318 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು, ಅಣ್ಣಿಗೇರಿ-ನವಲಗುಂದ-ಹೆಬಸೂರ-ಧಾರವಾಡ-ಕಳಸ ಮಾರ್ಗದ 200 ಕಿ.ಮೀ.ರಸ್ತೆ, ನರಗುಂದ-ಜಗಳೂರು ಮಾರ್ಗದ 260 ಕಿ.ಮೀ. ರಸ್ತೆ, ಅಫ್ಝಲ್‌ಪುರ-ಅಲಮೇಲ-ಇಂಡಿ-ಲೋಕಾಪುರ ಮಾರ್ಗದ 180 ಕಿ.ಮೀ. ರಸ್ತೆ, ಸಂಕೇಶ್ವರ-ಗೋಕಾಕ್-ಯರಗಟ್ಟಿ- ನರಗುಂದ ಮಾರ್ಗದ 150 ಕಿ.ಮೀ. ರಸ್ತೆ, ನರಗುಂದ-ರೋಣ-ಗಜೇಂದ್ರಗಡ- ಕುಷ್ಟಗಿ ಮಾರ್ಗದ 150 ಕಿ.ಮೀ. ರಸ್ತೆ ಸೇರಿದಂತೆ ಒಟ್ಟು 6 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದರು.
ವಿವಿಧ ರಸ್ತೆಗಳು ಮೇಲ್ದರ್ಜೆಗೆ:  
ಬಳ್ಳಾರಿ-ಶಿರಗುಪ್ಪ ಮಾರ್ಗದ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿಸುವುದು ಹಾಗೂ ಬಳ್ಳಾರಿ-ಹಿರಿಯೂರು ಮಾರ್ಗದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ಯೋಜನೆಗೆ ತಯಾರಿಸಿರುವ ಡಿಪಿಆರ್‌ಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದ್ದು, ಶೀಘ್ರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಕೊಪ್ಪಳ-ರಾಯಚೂರು ರಾಜ್ಯ ಹೆದ್ದಾರಿಯನ್ನು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಲಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಲಾಗುವುದು. ರಾಜ್ಯದ ಬೇಲೆಕೇರಿ ಬಂದರು ಅಭಿವೃದ್ಧಿಗೆ 6 ಸಾವಿರ ಕೋಟಿ ರೂ. ಅಗತ್ಯವಿದೆ ಎಂಬುದಾಗಿ ವರದಿ ಸಲ್ಲಿಸಿದ್ದು, ರಾಜ್ಯ ಸರಕಾರ ಶಿಫಾರಸು ಮಾಡಿ, ಸಮಗ್ರ ಯೋಜನೆ ರೂಪಿಸಿ ಸಲ್ಲಿಸಿದಲ್ಲಿ ಅನುದಾನವನ್ನು ಒದಗಿಸಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ನಿತಿನ್ ಗಡ್ಕರಿ ಹೇಳಿದರು. ಭೂ ಸ್ವಾಧೀನ ತ್ವರಿತವಾಗಲಿ:  ಬೆಂಗಳೂರಿನಲ್ಲಿ ಕಳೆದ ಬಾರಿ ಜರಗಿದ ಕೈಗಾರಿಕಾ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬಂದ ಸಂದರ್ಭದಲ್ಲಿ, ಕೇಂದ್ರ ಸರಕಾರದ 5 ವರ್ಷಗಳ ಅಧಿಕಾರವಧಿಯಲ್ಲಿ 1ಲಕ್ಷ ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಭರವಸೆಯನ್ನು ನೀಡಲಾಗಿತ್ತು. ಅದರಂತೆ ಈಗಾಗಲೇ ಸುಮಾರು 45 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗಳು ಪ್ರಾರಂಭಗೊಂಡಿವೆ.
 ರಾಜ್ಯದಲ್ಲಿ 7 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದೆ. ರಾಜ್ಯ ಸರಕಾರ ಸಹಕಾರ ಕೊಟ್ಟಲ್ಲಿ ಇದನ್ನು 14 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಸಿದ್ಧವಿದೆ. ಹೊಸದಾಗಿ ಘೋಷಣೆ ಮಾಡಿರುವ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಸದ್ಯ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಭೂ-ಸ್ವಾಧೀನ ಪ್ರಕ್ರಿಯೆ ಯನ್ನು ರಾಜ್ಯ ಸರಕಾರವೇ ಮಾಡಿಕೊಡಬೇಕಾಗುತ್ತದೆ ಎಂದರು.
ರಸ್ತೆ ಕಾಮಗಾರಿಗೆ ಕಬ್ಬಿಣದ ಅದಿರು ತ್ಯಾಜ್ಯ ಬಳಕೆ: ರಾಜ್ಯದಲ್ಲಿ ಕಬ್ಬಿಣದ ಅದಿರು ಹೇರಳವಾಗಿ ಲಭ್ಯವಾಗುತ್ತಿದ್ದು, ಅಧಿಕ ಪ್ರಮಾಣ ದಲ್ಲಿ ಸ್ಟೀಲ್ ಉದ್ಯಮವೂ ರಾಜ್ಯದಲ್ಲಿ ವಿಸ್ತರಿಸಿಕೊಂಡಿದೆ. ಕಬ್ಬಿಣದ ಅದಿರಿನ ತ್ಯಾಜ್ಯವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಬಳಕೆ ಮಾಡಿಕೊಂಡಲ್ಲಿ, ರಸ್ತೆಯ ಗುಣಮಟ್ಟವೂ ಹೆಚ್ಚಾಗಲಿದೆ. ಅಲ್ಲದೆ, ರಸ್ತೆ ನಿರ್ಮಾಣದ ವೆಚ್ಚವೂ ಸಹ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಕಾರ ಅಗತ್ಯವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಬಸವರಾಜ ರಾಯರಡ್ಡಿ, ಸಂಸದರಾದ ಕರಡಿ ಸಂಗಣ್ಣ, ಬಿ.ಎಸ್.ಯಡಿಯೂರಪ್ಪ, ಬಿ.ಶ್ರೀರಾಮುಲು ಮಾತನಾಡಿದರು. ಸಚಿವ ರಮೇಶ್ ಜಿಗಜಿಣಗಿ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ದೊಡ್ಡನಗೌಡ ಪಾಟೀಲ್, ಶಿವರಾಜ ಎಸ್.ತಂಗಡಗಿ, ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಲಕ್ಷ್ಮೀನಾರಾಯಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯ ತವಾಡೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News