ವೈದ್ಯಕೀಯ ಕಾಲೇಜಿಗೆ ಅಬ್ದುಲ್ ಕಲಾಂ ಹೆಸರಿಡಲು ಒತ್ತಾಯ
ಕಾರವಾರ, ಸೆ.4: ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೆಸರಿಗೆ ಬದಲಾಗಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವೈದ್ಯಕೀಯ ವಿಜ್ಞಾನ ಸಂಸ್ಥೆ ಎಂದು ಹೆಸರು ಇಡಬೇಕು ಮತ್ತು ಸಂಸ್ಥೆಯ ಸುತ್ತಮುತ್ತಲಿನ ಅತಿಕ್ರಮಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಹಲವು ವರ್ಷಗಳ ಬೇಡಿಕೆ ಬಳಿಕ ಕಾರವಾರಕ್ಕೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಲಭಿಸಿದೆ. ಸಂಸ್ಥೆಗೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಹೆಸರನ್ನಿಟ್ಟು ಜಿಲ್ಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲದೇ ವೈದ್ಯಕೀಯ ಕಾಲೇಜಿಗೆ ಒಟ್ಟು 21 ಎಕರೆ ಭೂಮಿ ಇರುವ ಬಗ್ಗೆ ದಾಖಲೆಗಳಲ್ಲಿದೆ. ಆದರೆ ವಾಸ್ತವಿಕವಾಗಿ 18 ಎಕರೆ ಮಾತ್ರ ಬಳಕೆಯಲ್ಲಿದ್ದು, ಇನ್ನುಳಿದ ಜಾಗವನ್ನು ಸುತ್ತಮುತ್ತಲಿನವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಆದ್ದರಿಂದ ಕೂಡಲೇ ಅದನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರಗಳಿದ್ದರೂ ವಿದ್ಯುತ್ ಸಂಪರ್ಕ ಆಗಾಗ ಕಡಿತಗೊಳ್ಳುತ್ತಿದೆ. ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ಬಾರಿ ವಿದ್ಯುತ್‌ಕಡಿತಗೊಂಡಾಗ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ಈಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಆರಂಭಗೊಂಡಿದ್ದು, ಹೆಚ್ಚಿನ ವಿದ್ಯುತ್ ಸರಬರಾಜಿನ ಆವಶ್ಯಕತೆ ಇದೆ. ಆದ್ದರಿಂದ ಸೇಜವಾಡದ ಗ್ರೀಡ್‌ನಿಂದ ನೇರವಾಗಿ ಸಂಸ್ಥೆಗೆ ಅಂಡರ್‌ಗ್ರೌಂಡ್ ಮೂಲಕ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇಲ್ಲಿನ ಜಿಲ್ಲಾಸ್ಪತ್ರೆಗೆ ಒಂದೇ ಬಾವಿಯಿಂದ ನೀರು ಪೂರೈಕೆಯಾಗುತ್ತಿದ್ದು, ಇದರಿಂದ ಈ ಹಿಂದೆ ರೋಗಿಯೊಬ್ಬರು ಮೃತಪಟ್ಟಿದ್ದರು. ನಂತರ ಮೂರು ಚಿಕ್ಕ ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆಯಾದರೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಕೂಡಲೇ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.