ಆರೋಪಿಗೆ 5ವರ್ಷ ಶಿಕ್ಷೆ, 28ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ
ಸಾಗರ, ಸೆ. 4: ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಇಲ್ಲಿನ 5ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ 5ವರ್ಷ ಕಠಿಣ ಶಿಕ್ಷೆ ಮತ್ತು 28 ಸಾವಿರ ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ. ಕೇರಳ ಮೂಲದ ರೂಪೇಶ್ ಎಂಬ ವ್ಯಕ್ತಿಯು ಕಾರ್ಗಲ್‌ನ ಹೆರೋಡಿ-ಗುಡಿಹಿತ್ಲು ಗ್ರಾಮದ ಇಲಿಯಾಸ್ ಎಂಬವರ ಮನೆಗೆ ಜಮೀನಿನ ಕೆಲಸಕ್ಕೆ ಬಂದಿದ್ದನು. ದಿನಾಂಕ 15-12-2011ರ ರಾತ್ರಿ ಊಟ ಮಾಡಿದ ನಂತರ ಆರೋಪಿ ರೂಪೇಶ್ ತನ್ನ ತಂಗಿಯ ಮದುವೆಗಾಗಿ 25ಸಾವಿರ ರೂ. ನೀಡಬೇಕೆಂದು ಇಲಿಯಾಸ್ ಬಳಿ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡಲು ಇಲಿಯಾಸ್ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ರೂಪೇಶ್ ಮಚ್ಚು ತೆಗೆದುಕೊಂಡು ಇಲಿಯಾಸ್ ಅವರು ಮಲಗಿದ್ದಾಗ ಅವರ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದನು. ಈ ಸಂಬಂಧ ಗಣೇಶ್ ಭಟ್ ಎಂಬವರು ಕಾರ್ಗಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕುರಿತು ತನಿಖೆ ನಡೆಸಿದ ತನಿಖಾಧಿಕಾರಿ ಗುರುರಾಜ್ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಹೇಶ್ವರಿ ಎಸ್. ಹಿರೇಮಠ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರೂಪೇಶ್‌ಗೆ 5ವರ್ಷ ಕಠಿಣ ಶಿಕ್ಷೆ ಹಾಗೂ 28ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ 25ಸಾವಿರ ರೂ.ವನ್ನು ನೊಂದವರಿಗೆ ನೀಡುವಂತೆ ಸೂಚನೆ ನೀಡಿದ್ದಾರೆ.