‘ಪ್ರವಾಸಿತಾಣಗಳ ಅಭಿವೃದ್ಧಿಗೆ ಸಹಕರಿಸಿ: ವೀಣಾ ಅಚ್ಚಯ್ಯ
ಮಡಿಕೇರಿ, ಸೆ.4: ಕೊಡಗು ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲ ಚುನಾಯಿತ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸಹಕಾರ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮನವಿ ಮಾಡಿದ್ದಾರೆ.
ಶ್ರೀಬಸವೇಶ್ವರ ಹಾಗೂ ಸ್ವರ್ಣಗೌರಿ ಹೊನ್ನಮ್ಮ ಟ್ರಸ್ಟ್ ವತಿಯಿಂದ ಸ್ವರ್ಣಗೌರಿ ಮಹೋತ್ಸವದ ಅಂಗವಾಗಿ ರವಿವಾರ ಹೊನ್ನಮ್ಮನ ಕೆರೆಯಲ್ಲಿ ಬಾಗಿನ ಅರ್ಪಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಹೊನ್ನಮ್ಮನ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಇಲ್ಲಿನ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕಾದುದು ಗ್ರಾಮಸ್ಥರ ಕರ್ತವ್ಯವಾಗಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ಸಾಕಷ್ಟು ಅನುದಾನ ಬಿಡುಗಡೆ ಮಾಡಲು ರಾಜ್ಯ ಸರಕಾರ ಹಸಿರು ನಿಶಾನೆ ತೋರಿಸಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗಾಗಲೇ ಪ್ರತೀ ಜಿಲ್ಲೆಯಲ್ಲಿಯೂ ಪ್ರವಾಸಿ ಸ್ಥಳಗಳನ್ನು ಗುರುತಿಸಿ ಅದರ ಪಟ್ಟಿಯನ್ನು ನೀಡುವಂತೆ ತಿಳಿಸಿದ್ದಾರೆ ಎಂದು ವೀಣಾಅಚ್ಚಯ್ಯ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಮಾತನಾಡಿ, ಹೊನ್ನಮ್ಮನ ಕೆರೆ ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ನಾಲ್ಕು ಲಕ್ಷ ರೂ. ನೀಡಲಾಗುವುದು. ಸಾಕಷ್ಟು ವಿಸ್ತೀರ್ಣವುಳ್ಳ ಕೆರೆಯ ಅಭಿವೃದ್ಧಿ ಪಡಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ರಿವರ್ ರ್ಯಾಪ್ಟಿಂಗ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿದಲ್ಲಿ ಪ್ರವಾಸೋದ್ಯಮ ಬೆಳೆಯಲು ಹೆಚ್ಚಿನ ಅವಕಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಹೊನ್ನಮ್ಮನ ಕ್ಷೇತ್ರ ಅಭಿವೃದ್ಧಿಗೆ ಇದುವರೆಗೆ ವಿವಿಧ ಮೂಲಗಳಿಂದ ಹಾಗೂ ಮುಜರಾಯಿ ಇಲಾಖೆ ವತಿಯಿಂದ ರೂ. ಒಂದು ಕೋಟಿಗೂ ಅಧಿಕ ಕಾಮಗಾರಿ ನಡೆದಿದೆ. ಇಲ್ಲಿನ ಕೆರೆಯಲ್ಲಿ ಜಲ ಕ್ರೀಡೆ, ಸಾಹಸ ಪ್ರದರ್ಶನಕ್ಕೆ ವಿಪುಲ ಅವಕಾಶಗಳಿವೆ. ರ್ಯಾಪ್ಟಿಂಗ್‌ಗೆ ಅನುಕೂಲವಾಗುವ ದೃಷ್ಟಿಯಲ್ಲಿ ಉತ್ತಮ ತಾಂತ್ರಿಕ ಹಾಗೂ ಗುಣಮಟ್ಟದ ಬೋಟ್‌ಗಳನ್ನು ನೀಡಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಇದರೊಂದಿಗೆ ಗವಿಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ, ಕೆರೆಯ ಸುತ್ತಲೂ ರೇಲಿಂಗ್ಸ್ ಅಳವಡಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಡಿ.ಜೆ. ಈರಪ್ಪ ವಹಿಸಿದ್ದರು. ವೇದಿಕೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ತಾಪಂ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ಕುಸುಮಾ ಅಶ್ವತ್ಥ್, ದೊಡ್ಡಮಳ್ತೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಳಿಮಳ್ತೆ ದಿವಾಕರ್, ಮಾಹಿತಿ ಹಕ್ಕು ಆಯೋಗದ ಮಾಜಿ ಅಧ್ಯಕ್ಷ ವಿರೂಪಾಕ್ಷಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.