ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿಸಿ: ಜಿಪಂ ಅಧ್ಯಕ್ಷೆ ಚೈತ್ರಾಶ್ರೀ
ಚಿಕ್ಕಮಗಳೂರು, ಸೆ.4: ವಿದ್ಯಾರ್ಥಿನಿಲಯಗಳಲ್ಲಿ ಉತ್ತಮ ಗುಣಮಟ್ಟದ ಊಟೋಪಚಾರಗಳನ್ನು ನೀಡುವುದರೊಂದಿಗೆ ವಿದ್ಯಾರ್ಥಿಗಳು ವಿದ್ಯಾ ರ್ಜನೆ ಹೊಂದಲು ಪೂರಕ ವಾತಾವರಣವನ್ನು ಸೃಷ್ಟಿಸಬೇಕೆಂದು ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷೆ ಚೈತ್ರಾಶ್ರೀ ಮಾಲತೇಶ್ ತಿಳಿಸಿದರು.
ಅವರು ನಗರದ ಜಿಪಂ ಅಬ್ದುಲ್ ನಝೀರ್‌ಸಾಬ್ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಗಿರಿಜನ ಅಭಿವೃದ್ಧಿ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಗಳ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಿಗೆ ಒಂದು ದಿನದ ಪ್ರಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು.
ವಿದ್ಯಾರ್ಥಿನಿಲಯಗಳಲ್ಲಿ ಶಿಸ್ತು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡುವುದರೊಂದಿಗೆ, ಅವರು ಉತ್ತಮ ಶಿಕ್ಷಣ ಹೊಂದಲು ಅನುವು ಮಾಡಿಕೊಡಬೇಕು. ಕೆಲವೊಂದು ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಚ್ಛತೆ ಇಲ್ಲದೇ ಇರುವುದನ್ನು ಗಮನಿಸಿದ್ದೇನೆ. ಅಲ್ಲದೆ, ಕಾಯಿಪಲ್ಯಗಳನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಅವುಗಳ ನಿರ್ವಹಣೆ ಸರಿ ಇಲ್ಲದೆ ಕೊಳೆತು ಹೋಗಿ ರುವುದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರ ವಹಿಸಬೇಕೆಂದರು. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಗಳ ಕೊರತೆ ಕಂಡುಬಂದಲ್ಲಿ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಸಾಮಾನ್ಯವಾಗಿ ವಿದ್ಯಾರ್ಥಿಗಳು ಮನೆಯನ್ನು ಬಿಟ್ಟು ಹಾಸ್ಟೆಲ್‌ಗಳಿಗೆ ಬಂದು ಸೇರಿರುತ್ತಾರೆ. ಇವರನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕು. ಓದಿನ ಜೊತೆಗೆ ಮನೋರಂಜನೆ ಸೇರಿದಂತೆ ಸಂಜೆಯ ವೇಳೆಯಲ್ಲಿ ಆಟವಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್ಥಿಕ ಸಂಕಷ್ಟದಲ್ಲಿ ಇರುವವರು ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಬರುತ್ತಾರೆ. ಇವರನ್ನು ಉತ್ತಮ ಶಿಕ್ಷಣವಂತರಾಗಿ ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಹೊಂದಿ, ದೇಶದ ಆಸ್ತಿಯನ್ನಾಗಿ ನಿರ್ಮಾಣ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಪುಸ್ತಕದಲ್ಲಿರುವ ವಿಷಯಗಳನ್ನು ಮಸ್ತಕಕ್ಕೆ ತುಂಬುವುದು ಮಾತ್ರ ಶಿಕ್ಷಣವಲ್ಲ, ಅದರ ಜೊತೆಗೆ ಸಾಮಾನ್ಯ ಜ್ಞಾನ ಸೇರಿದಂತೆ ಪಠ್ಯೇತರ ಚಟುವಟಿಕೆಗಳ ಜ್ಞಾನ ಹೊಂದುವುದು ಮುಖ್ಯ ಎಂದರು. ಹಿರಿಯ ಪತ್ರಕರ್ತ ಗಿರಿಜಾ ಶಂಕರ್, ಜಿಪಂ ಉಪಕಾರ್ಯದರ್ಶಿ ರಾಜ್‌ಗೋಪಾಲ್ ಮಾತನಾಡಿದರು.
ಸಭೆಯಲ್ಲಿ ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯರಾದ ಬಿ. ಶಿವಣ್ಣ, ಹಿರಿಗಯ್ಯ, ಕೆ.ಆರ್. ಪ್ರಭಾಕರ್, ಅನಿತಾ ಮುತ್ತಪ್ಪ, ಕೆ.ಎಚ್. ವನಮಾಲಾ ದೇವರಾಜ, ಲಕ್ಕಮ್ಮ ಸಿದ್ದಪ್ಪ, ಹಿಂದುಳಿದ ವರ್ಗಗಳ ಜಿಲ್ಲಾಮಟ್ಟದ ಅಧಿಕಾರಿ ಮಂಜುನಾಥ್, ಐಟಿಡಿಪಿ ಅಧಿಕಾರಿ ಲಲಿತಾಬಾಯಿ ಮತ್ತಿತರರು ಉಪಸ್ಥಿತರಿದ್ದರು.