ಶಿವಮೊಗ್ಗ: ಲಕ್ಷಾಂತರ ರೂ. ಗೋಲ್‌ಮಾಲ್ ಪ್ರಕರಣ
<ರೇಣುಕೇಶ್ ಬಿ.
ಶಿವಮೊಗ್ಗ, ಸೆ. 4: ಇಲ್ಲಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಿಬ್ಬಂದಿ ಓರ್ವರು ಕಚೇರಿಯ ನಕಲಿ ದಾಖಲೆ ಸೃಷ್ಟಿಸಿ ಸುಮಾರು 60 ಲಕ್ಷ ರೂ. ವಂಚಿಸಿರುವ ಪ್ರಕರಣ ಇಲಾಖಾಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದ್ದು, ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಲಾಖೆ ಯಲ್ಲಿ ಅನುಸರಿಸಿಕೊಂಡು ಬರುತ್ತಿರುವ ನಿಯಮಗಳೇ ವಂಚನೆಗೆ ಮುಖ್ಯ ಕಾರಣ ಎನ್ನಬಹುದು.
ಪ್ರತಿಯೊಂದು ಇಲಾಖೆಯಲ್ಲಿ ಹಣ ವರ್ಗಾವಣೆ ಹಾಗೂ ಪಾವತಿಗೆ ಸಂಬಂಧಿಸಿದಂತೆ ಸ್ಥಳೀಯ ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ಖಾತೆಯಿರುತ್ತದೆ. ಹಾಗೆಯೇ ಖಜಾನೆಯ ಮೂಲಕವೂ ಹಣದ ವಹಿವಾಟು ಮಾಡುವ ಅವಕಾಶವಿರುತ್ತದೆ. ಇದರಿಂದ ನಕಲಿ ದಾಖಲೆ ಸೃಷ್ಟಿಸಿ ಹಣ ವಂಚನೆ ಮಾಡುವುದು ಕಷ್ಟ ಸಾಧ್ಯವಾಗುತ್ತದೆ. ಸ್ಥಳೀಯ ಇಲಾಖಾಧಿಕಾರಿಯ ಗಮನಕ್ಕೆ ಬಾರದೆ ಬ್ಯಾಂಕ್ ಅಥವಾ ಖಜಾನೆಯ ಮೂಲಕ ಹಣದ ವಹಿವಾಟು ನಡೆಯುವುದಿಲ್ಲ. ಆದರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಈ ವ್ಯವಸ್ಥೆಯಿಲ್ಲವಾಗಿದೆ. ಇಲಾಖೆಯ ಅಧಿಕಾರಿಗಳು ಸ್ಥಳೀಯ ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ಖಾತೆ ತೆರೆಯಲು ಅವಕಾಶವಿಲ್ಲ. ಹಾಗೆಯೇ ಖಜಾನೆಯ ಮೂಲಕವೂ ವ್ಯವಹರಿಸಲು ಆಸ್ಪದವಿರುವುದಿಲ್ಲ. ಇಲಾಖೆಯ ಆಯುಕ್ತರ ಹೆಸರಿನಲ್ಲಿ ಬೆಂಗಳೂರಿನಲ್ಲಿ ತೆರೆದಿರುವ ಖಾತೆಯ ಮೂಲಕವೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕಚೇರಿಗಳ ಪ್ರತಿಯೊಂದು ಹಣದ ವ್ಯವಹಾರ ನಡೆಸಬೇಕಾಗಿದೆ. ಇದರಿಂದ ಸ್ಥಳೀಯ ಇಲಾಖಾಧಿಕಾರಿಯ ಗಮನಕ್ಕೆ ಬಾರದಂತೆ ಕೆಲ ಸಿಬ್ಬಂದಿ ಇಲಾಖೆಯ ಹಣ ವಂಚನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿಯಿದೆ. ಇದಕ್ಕೆ ಶಿವಮೊಗ್ಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಅವ್ಯವಹಾರವೇ ಸಾಕ್ಷಿಯಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಅಧಿಕಾರಿಯೋರ್ವರು ಹೇಳಿದ್ದಾರೆ.
ವ್ಯವಹಾರ ಹೇಗೆ?: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಕೈಗೊಳ್ಳುವ ಕುಡಿಯುವ ನೀರಿನ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್‌ಗಳನ್ನು ಬೆಂಗಳೂರಿನಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ಬಿಡಬ್ಲ್ಯೂಎಸ್‌ಎಸ್‌ಬಿ ಬ್ರ್ಯಾಂಚ್‌ನಿಂದ ಆರ್‌ಟಿಜಿಎಸ್ ಮುಖಾಂತರ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಪಾವತಿ ಮಾಡಲಾಗುತ್ತದೆ. ಆ ಖಾತೆಯನ್ನು ಇಲಾಖೆಯ ಆಯುಕ್ತರ ಹೆಸರಿನಲ್ಲಿ ತೆರೆಯಲಾಗಿರುತ್ತದೆ. ಕಚೇರಿಯಿಂದ ಸಲ್ಲಿಸಿದ ಪಾವತಿ ಆದೇಶದ ನಂತರವೇ, ಬ್ಯಾಂಕ್‌ನಿಂದ ಗುತ್ತಿಗೆದಾರರ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆಯಾಗುತ್ತದೆ. ಆರ್‌ಟಿಜಿಎಸ್ ಮೂಲಕ ಪಾವತಿಸಿದ ವಿವರಗಳನ್ನು ಬ್ಯಾಂಕ್‌ನವರು ಪ್ರತಿ ತಿಂಗಳು ಕಚೇರಿಯ ಇ-ಮೇಲ್‌ಗೆ ಕಳುಹಿಸಿ ಕೊಡುತ್ತಾರೆ. ಶಿವಮೊಗ್ಗದಲ್ಲಿ ನಡೆದಿರುವ ಪ್ರಕರಣದಲ್ಲಿ ಇಲಾಖಾಧಿಕಾರಿ ಹಾಗೂ ಲೆಕ್ಕಾಧಿಕಾರಿ ಗುತ್ತಿಗೆದಾರರಿಗೆ ಹಣ ಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗೆ ಸಲ್ಲಿಸಿದ ಮಾಹಿತಿಯ ಜೊತೆಗೆ ಆಪಾದಿತ ಕ್ಯಾಷಿಯರ್ ಇಲಾಖೆಯ ನಕಲಿ ದಾಖಲೆ, ಆದೇಶ ಪತ್ರ ಸೃಷ್ಟಿಸಿ
ತನಗೆ ಸೇರಿದ ವ್ಯಕ್ತಿಯೋರ್ವರ ಖಾತೆಗೆ ಇಲಾಖೆಯ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಅಲ್ಲಿಂದ ಹಣ ಬಿಡುಗಡೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೂರು ಬಾರಿ ಅಕ್ರಮವಾಗಿ ಇಲಾಖೆಯ ಹಣವನ್ನು ಆಪಾದಿತ ಸಿಬ್ಬಂದಿ ಬೆಂಗಳೂರಿನ ಬ್ಯಾಂಕ್ ಶಾಖೆಯ ಮೂಲಕ ವರ್ಗಾಯಿಸಿದ್ದಾನೆ. ಆದರೆ, 2016 ರ ಆಗಸ್ಟ್ ನ ಮಾಹಿತಿಯನ್ನು ಬ್ಯಾಂಕ್‌ನವರು ಕಳುಹಿಸಿದ ವೇಳೆ ಬೇರೊಂದು ಖಾತೆಗೆ ಹಣ ವರ್ಗಾವಣೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಇತರ ಸಂದರ್ಭಗಳಲ್ಲಿ ಆದ ಹಣದ ವರ್ಗಾವಣೆಯ ಾಹಿತಿಯನ್ನು ಬ್ಯಾಂಕ್‌ನವರು ಕಚೇರಿಗೆ ಕಳುಹಿಸಿಕೊಟ್ಟಿಲ್ಲದ ಕಾರಣ ಸ್ಥಳೀಯ ಅಧಿಕಾರಿಗಳಿಗೆ ಈ ವಂಚನೆಯ ಬಗ್ಗೆ ಮಾಹಿತಿಯೇ ಇಲ್ಲದಿರಲು ಮುಖ್ಯ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಬ್ಯಾಂಕ್‌ನ ಕಾರ್ಯನಿರ್ವಹಣೆಯ ಬಗ್ಗೆಯೂ ಚರ್ಚೆಗೆ ಎಡೆ ಮಾಡಿಕೊಡುವಂತಾಗಿದೆ.
ಒಟ್ಟಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನಡೆದಿರುವ ಲಕ್ಷಾಂತರ ರೂ. ಗೋಲ್‌ಮಾಲ್ ಪ್ರಕರಣ ಈಗ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದ ಇಲಾಖೆಗಳ ವಲಯದಲ್ಲಿ ವ್ಯಾಪಕ ಚರ್ಚೆಗೀಡಾಗಿರುವುದಂತೂ ಸತ್ಯ.
ಇನ್ನಾದರೂ ಇಲಾಖೆಯ ಹಿರಿಯ ಅಧಿಕಾರಿಗಳು ಹಣ ವರ್ಗಾವಣೆಯ ನಿಯಮಾವಳಿಗಳಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾಗಿದೆ. ಆನ್‌ಲೈನ್ ಹಾಗೂ ಇತರ ತಂತ್ರಜ್ಞಾನಗಳನ್ನು ಸದುಪಯೋಗ ಪಡಿಸಿಕೊಂಡು ಕಾರ್ಯನಿರ್ವಹಣೆ ಮಾಡಿದ ಗುತ್ತಿಗೆದಾರರಿಗೆ ಹಣ ಪಾವತಿಯಾಗುವ ವ್ಯವಸ್ಥೆ ಮಾಡಬೇಕಾಗಿದೆ.