×
Ad

ಜಿಂಕೆ ಕೊಂಬು ಸಿಕ್ಕ ಸ್ಥಳ ಸ್ವಚ್ಛ: ಪ್ರಕರಣ ಮುಚಿ್ಚ ಹಾಕಲು ಯತ್ನ

Update: 2016-09-04 23:43 IST

ಗುಂಡ್ಲುಪೇಟೆ, ಸೆ.4: ತಾಲೂಕಿನ ಪ್ರಖ್ಯಾತ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ನಡೆದ ಅರಣ್ಯಾಧಿಕಾರಿಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಮೋಜು ಮಸ್ತಿ ನೆಪದಲ್ಲಿ ಮದ್ಯ ಪೂರೈಸಿ, ಜಿಂಕೆ ಮಾಂಸದೂಟ ನೀಡಿರುವ ಬಗ್ಗೆ ಸಿಕ್ಕಿದ್ದ ಸಾಕ್ಷ್ಯಾಧಾರಗಳನ್ನು ಆ ಸ್ಥಳವನ್ನು ಸ್ವಚ್ಛಗೊಳಿಸುವ ಮೂಲಕ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಸಂಗತಿ ತಿಳಿದುಬಂದಿದೆ. ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಜಂಗಲ್ ಲಾಡ್ಜಸ್‌ನಲ್ಲಿ ಕಳೆದ ಐದು ದಿನಗಳಿಂದ ಉನ್ನತ ಅರಣ್ಯಾಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮೋಜು, ಮಸ್ತಿ ನಡೆದಿದ್ದ ಬಗ್ಗೆ ಪತ್ರಿಕೆ ವರದಿ ಮಾಡಿತ್ತು.

ಬಂಡೀಪುರದ ಜಂಗಲ್ ಲಾಡ್ಜಸ್ ಮತ್ತು ಸ್ವಾಗತ ಕಚೇರಿ ಹಿಂಬಾಗದ ವಸತಿಗೃಹಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಾಸ್ತವ್ಯ ಏರ್ಪಡಿಸಲಾಗಿತ್ತು. ಇವರಲ್ಲಿ ಕರ್ನಾಟಕದ ಅಧಿಕಾರಿಗಳು ಜಂಗಲ್ ಲಾಡ್ಜಸ್‌ನಲ್ಲಿ ವಾಸ್ತವ್ಯ ಹೂಡಿದ್ದರೆ, ಕೇರಳ ಮತ್ತು ತಮಿಳುನಾಡಿನ ಅರಣ್ಯಾಧಿ ಕಾರಿಗಳು ಚೀತಾಲ್, ಗಜೇಂದ್ರ, ಮಯೂರ ಮುಂತಾದ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಿದ್ದರು.

ತರಬೇತಿ ಕಾರ್ಯಾಗಾರ ಶುಕ್ರವಾರ ಮುಕ್ತಾಯವಾ ಗುತ್ತಿದ್ದ ಕಾರಣ ಗುರುವಾರ ರಾತ್ರಿ 60 ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳಿಗೆ ಮದ್ಯ ಪೂರೈಕೆ ಮಾಡಲಾಗಿತ್ತು. ಇದಕ್ಕೆ ಸಾಕ್ಷಿಯೆಂಬಂತೆ ಮ್ಯಾಕ್‌ಡೊವೆಲ್, ಯುಬಿ ಕಂಪೆನಿಯ ಮದ್ಯದ ಕಂಪೆನಿಯ ಲೇಬಲ್‌ವುಳ್ಳ ರಟ್ಟಿನ ಡಬ್ಬಗಳು, ಬಿಯರ್, ಬಡ್‌ವೈಸರ್ ಮದ್ಯ, ತಂಪು ಪಾನೀಯ, ಕುಡಿಯುವ ನೀರಿನ ಖಾಲಿ ಬಾಟಲ್‌ಗಳು, ಜಿಂಕೆ ಕೊಂಬುಗಳು, ಮತ್ತು ತಲೆಯ ಕವಚಗಳು ಚೀತಾಲ್ ವಸತಿಗೃಹದ ಹಿಂಭಾಗದಲ್ಲಿ ಕಂಡು ಬಂದಿದ್ದವು. ಶನಿವಾರ ಬೆಳಗ್ಗೆ ಸ್ಥಳವನ್ನು ಸ್ವಚ್ಚಗೊಳಿಸಿ, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿರುವುದು ಕಂಡು ಬಂದಿದೆ. ಅಕ್ರಮ ನಡೆಸಿರುವ ಮತ್ತು ನಡೆಯಲು ಸಹಾಯ ನೀಡಿದ ಅಧಿಕಾರಿ ಯ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದೇ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಘಟನೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪರಿಸರ ಪ್ರಿಯರಲ್ಲಿ ಅಸಹ್ಯ ಮೂಡಿಸಿದೆ. ಈ ಬಗ್ಗೆ ಅರಣ್ಯ ಸಂರಕ್ಷಣಾ ಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪರಿಸರ ಪ್ರಿಯರಾದ ರಾಘವೇಂದ್ರ, ಮಹಾಂತೇಶ್, ಶಿವಕುಮಾರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News